ಉಗ್ರರಿಗೆ ಸಮವಸ್ತ್ರ ಮಹತ್ವ ಗೊತ್ತಿಲ್ಲದಿರಬಹುದು, ಆದರೆ ಭಾರತೀಯ ಮುಸ್ಲಿಮರಿಗೆ ತಿಳಿದಿರಬೇಕು: ಅಸ್ಸಾಂ ಸಿಎಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಹಿಜಾಬ್‌ ವಿವಾದದ ಕುರಿತಾಗಿ ಮುಖ್ಯಮಂತ್ರಿ ಅಸ್ಸಾಂ ಹಿಮಂತ್ ಬಿಸ್ವಾ ಶರ್ಮಾ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ್ದಾರೆ. ಇಸ್ಲಾಂ ಆಧರಿತ ರಾಜಕೀಯವನ್ನು ಕಾಂಗ್ರೆಸ್ ಪ್ರಾಯೋಜಿಸುತ್ತಿದೆ, ಏಕೆಂದರೆ ಆ ಪಕ್ಷದ ಆತ್ಮದಲ್ಲಿಯೇ ಮೊಹಮದ್‌ ಅಲಿ ಜಿನ್ನಾ ಡಿಎನ್‌ಎ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕದಲ್ಲಿ ಜೈಶ್ರೀರಾಮ್​ ಎಂದು ಘೋಷಣೆ ಕೂಗಿದ್ದ ವಿದ್ಯಾರ್ಥಿಗಳ ಎದುರು ಅಲ್ಲಾ ಹು ಅಕ್ಬರ್​ ಎಂದು ಕೂಗಿದ್ದ ಮಂಡ್ಯದ ಮುಸ್ಕಾನ್​ಳನ್ನು ಅಲ್​ ಖೈದಾ ಉಗ್ರ ಜವಾಹಿರಿ ಹೊಗಳಿದ ಬಗ್ಗೆ ಸಹ ಪ್ರತಿಕ್ರಿಯಿಸಿರುವ ಹಿಮಂತ್ ಬಿಸ್ವಾ, ಉಗ್ರರಿಗೆ ಸಮವಸ್ತ್ರದ ಮಹತ್ವ ತಿಳಿದಿಲ್ಲದಿರಬಹುದು, ಆದರೆ ಭಾರತೀಯ ಮುಸ್ಲೀಮರಿಗೆ ತಿಳಿದಿರಬೇಕು. ಸಮವಸ್ತ್ರ ನೀತಿ ಕುರಿತ ಹೈಕೋರ್ಟ್‌ ತೀರ್ಪು ಪಾಲನೆಯಾಗಬೇಕು ಎಂದು ಹೇಳಿದ್ದಾರೆ.
ಶಾಲೆ-ಕಾಲೇಜುಗಳಿಗೆ ಎಲ್ಲ ಧರ್ಮದವರೂ ಹೋಗುತ್ತಾರೆ. ಅಲ್ಲಿ ಒಬ್ಬರು ಹಿಜಾಬ್ ಧರಿಸಿದರೆ, ಇನ್ನೊಂದು ಧರ್ಮದವರು ತಮ್ಮ ಧಾರ್ಮಿಕ ಸಂಕೇತವನ್ನು ಧರಿಸಿ ಬರುತ್ತಾರೆ. ಹೀಗೆ ಆದರೆ ಶಾಲೆ-ಕಾಲೇಜುಗಳು ಧಾರ್ಮಿಕ ಆಚರಣೆಗಳನ್ನು ಆಚರಿಸುವ ಸ್ಥಳಗಳಾಗಿ ಪರಿವರ್ತನೆಗೊಳ್ಳುತ್ತವೆ. ಯಾರಲ್ಲೂ ಬೇಧ-ಭಾವ ಮೂಡಬಾರದು ಎಂಬ ಕಾರಣಕ್ಕೆ ಸಮವಸ್ತ್ರ ನಿಗದಿಪಡಿಸಲಾಗುತ್ತದೆ. ಅದರ ಮೇಲೆ ಕೂಡ ಹೀಗೆ ಹಿಜಾಬ್​, ಮತ್ತೊಂದು ಧರಿಸಿದರೆ ಅಲ್ಲಿ ಸಮಾನತೆಗೆ ಏನು ಅರ್ಥ ಬಂದಂತಾಯಿತು ಎಂದು ಬಿಸ್ವಾ ಪ್ರಶ್ನಿಸಿದ್ದಾರೆ.
ವಿದ್ಯಾರ್ಥಿಯು ಹಿಜಾಬ್ ಧರಿಸಿದರೆ ಪಾಠಗಳನ್ನು ಅರ್ಥಮಾಡಿಕೊಳ್ಳುತ್ತಿದ್ದರೋ ಇಲ್ಲವೋ ಎಂಬುದು ಶಿಕ್ಷಕರಿಗೆ ಹೇಗೆ ತಿಳಿಯುತ್ತದೆ? ಮುಸ್ಲಿಂ ಸಮುದಾಯಕ್ಕೆ ಶಿಕ್ಷಣ ಬೇಕು, ಹಿಜಾಬ್ ಅಲ್ಲ. ಹಿಜಾಬ್‌ ವಿಚಾರದಲ್ಲಿ ಸಹ ಕಾಂಗ್ರೆಸ್‌ ತುಷ್ಟೀಕರಣ ರಾಜಕಾರಣಕ್ಕಿಳಿದಿದೆ . ಆ ಪಕ್ಷವು ದೇಶವನ್ನು ವಿಭಜಿಸಲು ಯತ್ನಿಸುತ್ತಿರುವ ರೀತಿ ಕಳವಳಕಾರಿಯಾಗಿದೆ. ಅವರು ಕೆಲವೊಮ್ಮೆ ಭಾರತ ರಾಷ್ಟ್ರವಲ್ಲ ಅದೊಂದು ರಾಜ್ಯಗಳ ಒಕ್ಕೂಟ ಎಂದೆಲ್ಲಾ ಹೇಳುತ್ತಾರೆ. ಕಾಂಗ್ರೆಸ್ ಮತಗಳ ಧ್ರುವೀಕರಣಕ್ಕೆ ಎಂತಹ ಮಟ್ಟಕ್ಕೂ ಇಳಿಯಬಲ್ಲದು. ಮದರಸಾಗಳನ್ನು ತೆರೆಯುವುದು ಸರಿ ಎಂದು ಹೇಳುತ್ತಾರೆ. ಹಿಜಾಬ್ ಧರಿಸುವುದು ಸರಿ ಎನ್ನುತ್ತಾರೆ. ಮುಸ್ಲೀಮರು ಪ್ರಗತಿಶೀಲರಾದರೆ ಅವರ ಮತಗಳು ತನಗೆ ಬೀಳುವುದಿಲ್ಲ ಎಂದು ಅರಿತಿರುವ ಕಾಂಗ್ರೆಸ್‌ ಮುಸ್ಲಿಮರು ಹಿಂದುಳಿದಿರುವುದನ್ನೇ ಬಯಸುತ್ತದೆ ಎಂದು ಶರ್ಮಾ ವಾಗ್ದಾಳಿ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!