ಹೊಸದಿಗಂತ ಡಿಜಿಟಲ್ ಡೆಸ್ಕ್:
ತನ್ನ ಪತ್ನಿ ಕೇಂದ್ರ ಸರ್ಕಾರದ ಯೋಜನೆಗಳಲ್ಲಿ 10 ಕೋಟಿ ರೂಪಾಯಿ ಸಬ್ಸಿಡಿ ಪಡೆದಿದ್ದಾರೆ ಎಂದು ಸಾಬೀತು ಮಾಡಿದರೆ ಸಾರ್ವಜನಿಕ ಜೀವನದಿಂದಲೇ ನಿವೃತ್ತಿ ಪಡೆಯುವುದಾಗಿ ಅಸ್ಸಾಂ ಮುಖ್ಯಮಂತ್ರಿ ಡಾ.ಹಿಮಂತ್ ಬಿಸ್ವಾ ಶರ್ಮಾ ಸವಾಲು ಹಾಕಿದ್ದಾರೆ.
ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್, ಭಾರತದ ರೈತರ ಆದಾಯವನ್ನು ದ್ವಿಗುಣಗೊಳಿಸಲು ಪಿಎಂಕೆಎಸ್ವೈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಆದರೆ ಅಸ್ಸಾಂನಲ್ಲಿ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು ತಮ್ಮ ಪ್ರಭಾವವನ್ನು ಬಳಸಿಕೊಂಡು ತಮ್ಮ ಪತ್ನಿಯ ಸಂಸ್ಥೆಗೆ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿಯಾಗಿ 10 ಕೋಟಿ ರೂಪಾಯಿ ಕೊಡಿಸಲಾಗಿದೆ. ಕೇಂದ್ರ ಸರ್ಕಾರದ ಯೋಜನೆಗಳು ಬಿಜೆಪಿಯನ್ನು ಶ್ರೀಮಂತಗೊಳಿಸುವ ಉದ್ದೇಶ ಹೊಂದಿವೆಯೇ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಶರ್ಮಾ, ನನ್ನ ಪತ್ನಿಯಾಗಲಿ ಅಥವಾ ಅವರು ನಂಟು ಹೊಂದಿರುವ ಯಾವುದೇ ಕಂಪನಿಯಾಗಲಿ ಕೇಂದ್ರ ಸರ್ಕಾರದಿಂದ ಹಣಕಾಸಿನ ನೆರವು ಪಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದಕ್ಕೆ ಮರು ಟ್ವೀಟ್ ಮಾಡಿರುವ ಗೊಗೊಯ್, ಸರ್ಕಾರದ ವೆಬ್ಸೈಟ್ನಲ್ಲಿ ನಮೂದಾಗಿರುವ ಮಾಹಿತಿ ಸುಳ್ಳೇ ಎಂದು ದಾಖಲೆಯೊಂದನ್ನು ಹಂಚಿಕೊಂಡಿದ್ದಾರೆ.
ಗುರುವಾರ ಮತ್ತೆ ಈ ವಿಚಾರವಾಗಿ ಎಕ್ಸ್ನಲ್ಲಿ ಟಾಕ್ ವಾರ್ ನಡೆಸಿರುವ ಇಬ್ಬರೂ, ‘ನಿನ್ನೆ ಹಿಮಂತ್ ಬಿಸ್ವಾ ಶರ್ಮಾ ಅವರ ಪತ್ನಿಗೆ ಸರ್ಕಾರದ ಸಹಾಯಧನ ನೀಡಲಾಗಿದೆ ಎಂದು ಪ್ರಶ್ನಿಸಿದ್ದೆ. ಅದಕ್ಕೆ ಅವರು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರಿಗೆ ದೂರು ನೀಡಿದ್ದಾರೆಯೇ?. ಪಿಯೂಷ್ ಗೋಯಲ್ ಅವರು ಸಂಸತ್ತಿಗೆ ನೀಡಿರುವ ಉತ್ತರ ಸುಳ್ಳೇ. ಹಾಗಿದ್ದರೆ, ಈ ಬಗ್ಗೆ ಇಬ್ಬರೂ ಸ್ಪಷ್ಟಪಡಿಸಬೇಕು ಎಂದು ಕೋರಿದ್ದಾರೆ.
ಪಿಯೂಷ್ ಗೋಯಲ್ ಅವರ ಉತ್ತರವನ್ನು ಉಲ್ಲೇಖಿಸಿ ಉತ್ತರಸಿರುವ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ, ಕೇಂದ್ರ ಸರ್ಕಾರ ಹೇಳಿರುವ ಕಂಪನಿಗೆ ಹಣವನ್ನು ಬಿಡುಗಡೆ ಮಾಡಿಲ್ಲ. ನಾನು ಮತ್ತೊಮ್ಮೆ ಹೇಳುತ್ತಿದ್ದೇನೆ. ನನ್ನ ಪತ್ನಿ ಅಥವಾ ಆಕೆಗೆ ಸಂಬಂಧಿಸಿದ ಕಂಪನಿಯಾಗಲಿ ಸರ್ಕಾರದಿಂದ ಯಾವುದೇ ಅನುದಾನ ಪಡೆದಿಲ್ಲ. ಈ ಬಗ್ಗೆ ಬೇಡಿಕೆಯಿಟ್ಟಿಲ್ಲ. ಯಾರಾದರೂ ಇದಕ್ಕೆ ಸಾಕ್ಷ್ಯವನ್ನು ನೀಡಿದರೆ, ಸಾರ್ವಜನಿಕ ಜೀವನದಿಂದ ನಿವೃತ್ತಿ ಹೊಂದುವೆ. ಜೊತೆಗೆ ಯಾವುದೇ ಶಿಕ್ಷೆಯನ್ನು ಸ್ವೀಕರಿಸಲು ನಾನು ಸಿದ್ಧನಿದ್ದೇನೆ ಎಂದು ಸವಾಲು ಹಾಕಿದ್ದಾರೆ.