ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಸ್ಸಾಂನಲ್ಲಿ ಸಂಭವಿಸಿದ ಭೀಕರ ಪ್ರವಾಹ ಮತ್ತು ಭೂ ಕುಸಿತದಿಂದಾಗಿ 20 ಜಿಲ್ಲೆಗಳ 2 ಲಕ್ಷ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹಾಫ್ಲಾಂಗ್ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ 3 ಮಂದಿ ಸಾವನ್ನಪ್ಪಿದ್ದಾರೆ. ಕ್ಯಾಚಾರ್ ಜಿಲ್ಲೆಯಲ್ಲಿಯೂ ಕೂಡ 2 ಮಂದಿ ಪ್ರವಾಹದಿಂದ ಸಾವನ್ನಪ್ಪಿದ್ದಾರೆ. ಒಟ್ಟಾರೆ, ಸುಮಾರು 1,97,248 ಜನರು ಪ್ರವಾಹ ಮತ್ತು ಭೂಕುಸಿತದಿಂದ ಸಂತ್ರಸ್ತರಾಗಿದ್ದಾರೆ. ಕ್ಯಾಚಾರ್ ಮತ್ತು ಹೊಜೈ ಜಿಲ್ಲೆಗಳು ಹೆಚ್ಚು ಹಾನಿಗೊಳಗಾಗಿವೆ. ಕಳೆದ 24 ಗಂಟೆಗಳಲ್ಲಿ ವಿವಿಧ ಜಿಲ್ಲೆಗಳಲ್ಲಿ 16 ಕಡೆ ಒಡ್ಡುಗಳು ಒಡೆದಿವೆ. ಹಲವಾರು ಪ್ರದೇಶಗಳಲ್ಲಿ ರಸ್ತೆಗಳು, ಸೇತುವೆಗಳು ಮತ್ತು ಮನೆಗಳು ಸಂಪೂರ್ಣ ಜಲಾವೃತಗೊಂಡಿವೆ. ಭೂಕುಸಿತದಿಂದಾಗಿ ದಿಮಾ ಹಸಾವೊ ಜಿಲ್ಲೆಯ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ ಎಂದು ರಾಜ್ಯ ಬುಲೆಟಿನ್ ತಿಳಿಸಿದೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಕೈಗೊಳ್ಳಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್), ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್), ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಹರಸಾಹಸ ಪಡುತ್ತಿವೆ. ಏಳು ಜಿಲ್ಲೆಗಳಲ್ಲಿ ಸುಮಾರು 55 ಪರಿಹಾರ ಶಿಬಿರಗಳನ್ನು ತೆರೆಯಲಾಗಿದ್ದು, 32,959 ಜನರಿಗೆ ಆಶ್ರಯ ನೀಡಲಾಗಿದೆ. ಇತರ ಜಿಲ್ಲೆಗಳಲ್ಲಿ ಇನ್ನೂ 12 ಪರಿಹಾರ ವಿತರಣಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.