Saturday, June 25, 2022

Latest Posts

ಬದ್ಧತೆ-ಸಿದ್ದಾಂತದ ವಿಚಾರದಲ್ಲಿ ಸಂಘ ಕಲಿಸಿಕೊಟ್ಟಿದ್ದಕ್ಕೆ ನಾವು ಬದ್ಧ: ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಬೋಪಯ್ಯ ತಿರುಗೇಟು

ಹೊಸದಿಗಂತ ವರದಿ ಮಡಿಕೇರಿ:

ಪೊನ್ನಂಪೇಟೆಯ ಶಾಲೆಯೊಂದರಲ್ಲಿ ವಿಶ್ವ ಹಿಂದೂ ಪರಿಷದ್ ಹಾಗೂ ಭಜರಂಗದಳದ ವತಿಯಿಂದ‌ ನಡೆದ ಪ್ರಶಿಕ್ಷಣ ವರ್ಗದಲ್ಲಿ ಭಾಗಿಯಾದ ಕೊಡಗಿನ ಶಾಸಕರ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಡಿರುವ ಟೀಕೆಗೆ ಶಾಸಕ ಕೆ.ಜಿ.ಬೋಪಯ್ಯ  ತಿರುಗೇಟು ನೀಡಿದ್ದಾರೆ.
ಈ‌ ಬಗ್ಗೆ ಟ್ವೀಟ್ ಮಾಡಿರುವ ಶಾಸಕ ಬೋಪಯ್ಯ ಅವರು, ಬರೇ ಒಂದು ವರ್ಗದ ಕ್ರಿಮಿನಲ್’ಗಳ ಕೇಸ್ ಮುಕ್ತಗೊಳಿಸಿದ ನೀವು ನಮಗೆ ಕಾನೂನಿನ ಪಾಠ ಮಾಡುವ ಅಗತ್ಯವಿಲ್ಲ ಎಂದು ಸಿದ್ದರಾಮಯ್ಯ ಅವರನ್ನು ಕುಟುಕಿದ್ದಾರೆ.
ಭಜರಂಗದಳ ನಡೆಸಿದ ಶೌರ್ಯ ಪ್ರಶಿಕ್ಷಣ ವರ್ಗದಲ್ಲಿ ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ ಮತ್ತು ಸುಜಾ ಕುಶಾಲಪ್ಪ ಪಾಲ್ಗೊಂಡಿದ್ದು, ಇವರ ಬದ್ಧತೆ ಸಂವಿಧಾನಕ್ಕೋ ಅಥವಾ ಭಜರಂಗದಳಕ್ಕೋ ಎಂಬ ಸಿದ್ದರಾಮಯ್ಯ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಬೋಪಯ್ಯ,ಡಿಜೆ ಹಳ್ಳಿ ಕೆಜೆ ಹಳ್ಳಿಯಲ್ಲಿ ದಲಿತ ಮುಖಂಡರ ಮನೆಗೆ ಮಾರಕಾಸ್ತ್ರಗಳೊಂದಿಗೆ ನುಗ್ಗಿ ಬೆಂಕಿ ಹಚ್ಚಿ ದಾಂಧಲೆ ಮಾಡಿದಾಗ ನಿಮ್ಮ ಬದ್ಧತೆಗೆ ಏನಾಗಿತ್ತು ಸಿದ್ದರಾಮಯ್ಯನವರೇ ಎಂದು‌ ಪ್ರಶ್ನಿಸಿದ್ದಾರೆ.
ಗೌರಿಪಾಳ್ಯ, ಮಂಗಳೂರಿನಲ್ಲಿ ಗಲಭೆ, ಹರ್ಷನ ಹತ್ಯೆ ಮಾಡಿದ ಮುಸಲ್ಮಾನರು ನಂತರದಲ್ಲಿ ಹುಬ್ಬಳ್ಳಿಯಲ್ಲಿ ಪೊಲೀಸರ ಮೇಲೆ ದಾಳಿ ಮಾಡಿ ಹತ್ಯೆ ಮಾಡಲು ಯತ್ನಿಸಿದಾಗ, ಕಳೆದ ವಾರ ಸರ್ಕಾರಿ ಕಚೇರಿಗೆ ನುಗ್ಗಿ ಕಾಶ್ಮೀರಿ ಪಂಡಿತರ ಹತ್ಯೆ ನಡೆದಾಗ ಎಲ್ಲಿ ಹೋಗಿತ್ತು ನಿಮ್ಮ ಬದ್ಧತೆ ಎಂದು ಬೋಪಯ್ಯ ಪ್ರಶ್ನೆಗಳ ಮಳೆಗೈದಿದ್ದಾರೆ
ಶಸ್ತ್ರಾಭ್ಯಾಸ ಅನಿವಾರ್ಯ: ಮತಾಂಧರ ಓಲೈಕೆ ಮಾಡುವ ನಿಮ್ಮಂತಹ ರಾಜಕಾರಣಿಗಳು ಇರುವವರೆಗೂ ಹಿಂದೂಪರ ಕಾರ್ಯಕರ್ತರು ಆತ್ಮರಕ್ಷಣೆಗಾಗಿ ಶಸ್ತ್ರಾಭ್ಯಾಸ ಮಾಡುವುದು ಅನಿವಾರ್ಯವಾಗಿದೆ ಎಂದಿರುವ ಕೆ.ಜಿ.ಬೋಪಯ್ಯ, ಆದರೆ ನಮ್ಮ ಕಾರ್ಯಕರ್ತರು ಶಸ್ತ್ರಾಭ್ಯಾಸ ಕಲಿತು ಬಂದೂಕು ತಗೆದುಕೊಂಡು ಡಿಜೆ ಹಳ್ಳಿ ಕೆಜಿ ಹಳ್ಳಿ ತರಹ ದಲಿತರ ಮನೆ ಎಂದಿಗೂ ನುಗ್ಗಿಲ್ಲ. ಎಂದಿಗೂ ಕಾಶ್ಮೀರಿ ಪಂಡಿತರನ್ನು ಗುಂಡಿಟ್ಟು ಕೊಂದಿಲ್ಲ. ಬಡ ರೈತರ ಕೊಟ್ಟಿಗಳಿಗೆ ನುಗ್ಗಿ ಬೆದರಿಸಿ ಗೋವುಗಳನ್ನು ಕದ್ದಿಲ್ಲ. ತಲವಾರು ಹಾಗೂ ಬಂದೂಕು ಹಿಡಿದು ಬಲವಂತದ ಮತಾಂತರ ಮಾಡಿಲ್ಲ. ಬಂದೂಕು ಹಿಡಿದು ಪಾರ್ಲಿಮೆಂಟ್ ಮೇಲೆ ದಾಳಿ ಮಾಡಿದ ಅಥವಾ ಭಯೋತ್ಪಾದಕರಾದ ಉದಾಹರಣೆಯಿಲ್ಲ. ಬಡಮಕ್ಕಳ ಕೈಗೆ ಬಂದೂಕು ನೀಡಿ ಕಾಡಿಗೆ ಕಳಿಸಿ ರಕ್ತ ಹರಿಸಿಲ್ಲ ಎಂದೂ ಬೋಪಯ್ಯ ಅವರು ಟೀಕಿಸಿದ್ದಾರೆ.
ತಮ್ಮ ಆಡಳಿತದಲ್ಲಿ ಮತಾಂಧ ಶಕ್ತಿಗಳ ಓಲೈಕೆಯನ್ನೇ ಬಂಡವಾಳ ಮಾಡಿಕೊಂಡು ಬಂದಿರುವ ನಿಮ್ಮಿಂದ ನಾವು ಸಂವಿಧಾನದ ಪಾಠ ಕಲಿಯಬೇಕಿಲ್ಲ.ಬದ್ಧತೆ, ಸಿದ್ಧಾಂತದ ವಿಚಾರದಲ್ಲಿ ನಮಗೆ ಸಂಘ ಏನು ಕಲಿಸಿಕೊಡಬೇಕೋ ಅದನ್ನು ಕಲಿಸಿಕೊಟ್ಟಿದೆ. ನಾವು ಅದಕ್ಕೆ ಬದ್ಧರಾಗಿದ್ದೇವೆ ಎಂದು ತಿರುಗೇಟು ನೀಡಿರುವ ಬೋಪಯ್ಯ ಅವರು, ನಿಮ್ಮಂತೆ ಸ್ಕ್ರೂ ಡ್ರೈವರ್ ಹೋಂ ಮಿನಿಸ್ಟರ್ ಇರುವ ಸರ್ಕಾರ ನಮ್ಮದಲ್ಲ, ನಮ್ಮ ಗೃಹ ಸಚಿವರು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲು ಸಮರ್ಥರಿದ್ದಾರೆ ಎಂದೂ ಬೋಪಯ್ಯ ಸರಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಸಿದ್ದರಾಮಯ್ಯ ಹೇಳಿದ್ದೇನು?:

ಕೊಡಗಿನ ಶಾಲೆಯೊಂದರ ಆವರಣದಲ್ಲಿ ಯುವಜನರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಿರುವ ಭಜರಂಗದಳ ಕಾನೂನಿಗೆ ಬಹಿರಂಗ ಸವಾಲು ಹಾಕಿದೆ. ಸಂಘಟನೆಯ ನಾಯಕರ ವಿರುದ್ಧ ಕ್ರಮ ಕೈಗೊಳ್ಳದ ಸರ್ಕಾರ ಜೀವಂತ ಇದೆಯೇ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.
ಬಂದೂಕು ಬಳಕೆಯ ತರಬೇತಿ ನೀಡಿದರೂ ಕ್ರಮ ಜರುಗಿಸದೇ ಇರುವುದನ್ನು ನೋಡಿದರೆ ರಾಜ್ಯದಲ್ಲಿ ಗೃಹ ಮತ್ತು ಶಿಕ್ಷಣ ಸಚಿವರಿದ್ದಾರೆಯೇ ಎಂಬ ಅನುಮಾನ ಬರುತ್ತದೆ. ಶಸ್ತ್ರಾಸ್ತ್ರ ತರಬೇತಿ‌‌ ಸಂಪೂರ್ಣವಾಗಿ ಕಾನೂನು ವಿರೋಧಿ ಚಟುವಟಿಕೆಯಾಗಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಕ್ಷಣ ಭಜರಂಗದಳದ ನಾಯಕರನ್ನು ಬಂಧಿಸಲು ಸೂಚಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದರು.
ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವ ಶ್ರೀರಾಮ ಸೇನೆ, ಭಜರಂಗ ದಳ, ಹಿಂದೂ ಜಾಗರಣ ವೇದಿಕೆ ಮೊದಲಾದ ಸಂಘಟನೆಗಳ‌ ಜೊತೆ ತನ್ನ ಸಂಬಂಧ ಏನು ಎಂಬುದನ್ನು ಬಿಜೆಪಿ‌ ಮೊದಲು ಸ್ಪಷ್ಟಪಡಿಸಬೇಕು. ರಾಜ್ಯದಲ್ಲಿ ಶಾಂತಿ ಕದಡಿ ಭೀತಿ ಹುಟ್ಟಿಸುವ ಉದ್ದೇಶದಿಂದ ಬಿಜೆಪಿ ಸರ್ಕಾರ ಕೋಮು‌ವಾದಿ ಸಂಘಟನೆಗಳಿಗೆ ವಿಶೇಷ ಅನುಮತಿ ನೀಡಿದೆಯೇ ಎಂದೂ ಅವರು ಪ್ರಶ್ನಿಸಿದ್ದರು.
ಅಲ್ಲದೆ ಭಜರಂಗ ದಳ ನಡೆಸಿದ ಶೌರ್ಯ ಪ್ರಶಿಕ್ಷಣ ವರ್ಗದಲ್ಲಿ ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ ಮತ್ತು ಸುಜಾ ಕುಶಾಲಪ್ಪ ಪಾಲ್ಗೊಂಡಿದ್ದಾರೆ. ಇವರ ಬದ್ಧತೆ ಸಂವಿಧಾನಕ್ಕೋ? ಭಜರಂಗ ದಳಕ್ಕೋ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss