ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಸ್ಸಾಂನ ಬರ್ಪೇಟಾ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿಯಿಂದಾಗಿ ರಸ್ತೆಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು, ಗ್ರಾಮಸ್ಥರು ಪರದಡುವ ಸ್ಥಿತಿ ಬಂದೊದಗಿದೆ. ಜಿಲ್ಲೆಯ ಸುಖುವರ್ಜಾರ್ ಮಹಿಷ್ಖುತಿ ಪ್ರದೇಶದ ಗ್ರಾಮಸ್ಥರು ಪ್ರವಾಹದಿಂದ ಪ್ರಭಾವಿತರಾಗಿದ್ದು, ರಸ್ತೆಯಿಲ್ಲದೆ ಭಾರೀ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಪ್ರವಾಹದಿಂದ ತಮ್ಮ ಊರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾಗುವುದರಿಂದ ಪ್ರತಿ ವರ್ಷ ಇದೇ ರೀತಿಯ ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ಸ್ಥಳೀಯ ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡರು. ಆ ಸಮಯದಲ್ಲಿ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಪಟ್ಟಿದ್ದ ಪಾಡು, ಆಸ್ಪತ್ರೆಗೆ, ಬೇರೆ ಊರಿಗೆ ಹೋಗಲು ಗ್ರಾಮಸ್ಥರು ಅನುಭವಿಸುತ್ತಿರುವ ಕಷ್ಟವನ್ನು ಮಾಧ್ಯಮಗಳಿಗೆ ವಿವರಿಸಿದರು.
ಆದಷ್ಟು ಬೇಗ ರಸ್ತೆ ದುರಸ್ಥಿ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದರು. ಹಾನಿಗೊಳಗಾದ ರಸ್ತೆಯನ್ನು ದಾಟಲು ಗ್ರಾಮಸ್ಥರು ಈಗ ಬಾಳೆ ತೆಪ್ಪಗಳನ್ನು ಬಳಸುವ ಪರಿಸ್ಥಿತಿ ಬಂದಿದೆ. ಅಸ್ಸಾಂನಲ್ಲಿ 22 ಜಿಲ್ಲೆಗಳಲ್ಲಿ ಸುಮಾರು 3.41 ಲಕ್ಷ ಜನರು ಪ್ರವಾಹದಿಂದ ಪ್ರಭಾವಿತರಾಗಿದ್ದಾರೆ.