ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಸ್ಸಾಂನ ಅಹೋಮ್ ರಾಜವಂಶದ ದಿಬ್ಬದ ಸಮಾಧಿ ವ್ಯವಸ್ಥೆ ‘ಮೋಯಿದಾಮ್’ಗಳನ್ನು ಯುನೆಸ್ಕೊದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲಾಗಿದ್ದು, ಇದು ದೇಶಕ್ಕೆ ಅತ್ಯಂತ ಖುಷಿಯ ಮತ್ತು ಹೆಮ್ಮೆಯ ವಿಚಾರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
‘ಅಸ್ಸಾಂನ ಚರೈಡಿಯೊದಲ್ಲಿರುವ ‘ಮೋಯಿದಾಮ್’ಗಳು ಅಹೋಮ್ ಸಾಮ್ರಾಜ್ಯದ ಮಹೋನ್ನತ ಸಂಸ್ಕೃತಿಯನ್ನು ಬಿಂಬಿಸುತ್ತವೆ. ಇದು ಪೂರ್ವಜರಿಗೆ ಅತ್ಯಂತ ಗೌರವವನ್ನು ನೀಡುವ ಸ್ಥಳವಾಗಿದ್ದು, ಮುಂದೆ ಹೆಚ್ಚು ಹೆಚ್ಚು ಜನರು ಖ್ಯಾತ ಅಹೋಮ್ ಸಾಮ್ರಾಜ್ಯ ಮತ್ತು ಅದರ ಸಂಸ್ಕೃತಿ ಬಗ್ಗೆ ಅಧ್ಯಯನ ನಡೆಸುತ್ತಾರೆ ಎಂದು ನಂಬುತ್ತೇನೆ. ‘ಮೋಯಿದಾಮ್’ಗಳು ಯುನೆಸ್ಕೊದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿರುವುದು ಸಂತಸ ತಂದಿದೆ. ಇದು ಭಾರತಕ್ಕೆ ಅತ್ಯಂತ ಖುಷಿಯ ಮತ್ತು ಹೆಮ್ಮೆಯ ಸಂಗತಿಯಾಗಿದೆ’ ಎಂದು ಎಕ್ಸ್ ಪೋಸ್ಟ್‌ನಲ್ಲಿ ಮೋದಿ ಬರೆದುಕೊಂಡಿದ್ದಾರೆ.
ಅಸ್ಸಾಂ ರಾಜ್ಯವನ್ನಾಳಿದ ಅಹೋಮ್ ಸಾಮ್ರಾಜ್ಯದ ದಿಬ್ಬಗಳ ಸಮಾಧಿ ವ್ಯವಸ್ಥೆಯನ್ನು ‘ಮೋಯಿದಾಮ್’ಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ಯುನೆಸ್ಕೊದ ಸಾಂಸ್ಕೃತಿಕ ಸ್ವತ್ತು ವಿಭಾಗದ ಅಡಿಯಲ್ಲಿ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲಾಗಿದೆ. ಸದ್ಯ ದೆಹಲಿಯಲ್ಲಿ ನಡೆಯುತ್ತಿರುವ ವರ್ಲ್ಡ್ ಹೆರಿಟೇಜ್ ಕಮಿಟಿಯ (ಡಬ್ಲ್ಯು ಎಚ್‌ಸಿ) ಅಧಿವೇಶನದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
‘ಇದೊಂದು ನಮ್ಮ ರಾಜ್ಯಕ್ಕೆ ಸಿಕ್ಕ ದೊಡ್ಡ ಗೌರವ’ಎಂದು ಅಸ್ಸಾಂನವರೇ ಆದ ಕೇಂದ್ರ ಸಚಿವ ಸರ್ಬಾನಂದ ಸೋನೊವಾಲ್ ಹೇಳಿದ್ದಾರೆ.