ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವಿನ ದಶಕಗಳಷ್ಟು ಹಳೆಯದಾದ ವಿವಾದವು ಮತ್ತೆ ಭುಗಿಲೆದ್ದಂತೆ ಕಾಣುತ್ತಿದೆ. ಮರಾಠಿ ಭಾಷೆಯಲ್ಲಿ ಮಾತನಾಡದ ಕಾರಣಕ್ಕೆ ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆಸಲಾಗಿದ್ದು ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ.
ಬೆಳಗಾವಿ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದ ಈ ಘಟನೆ, ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಬಸ್ ಸೇವೆಗಳನ್ನು ಸ್ಥಗಿತಗೊಳಿಸುವುದರೊಂದಿಗೆ ಈ ಪ್ರಕರಣ ಅಂತರರಾಜ್ಯ ವಿವಾದಕ್ಕೆ ಕಾರಣವಾಗಿದೆ.
ಕರ್ನಾಟಕವು ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ಬಸ್ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ, ಕೊಗನೊಳ್ಳಿ ಚೆಕ್‌ಪಾಯಿಂಟ್‌ನಲ್ಲಿ ತನ್ನ ಗಡಿಯವರೆಗೆ ಮಾತ್ರ ಸೇವೆಗಳನ್ನು ಒದಗಿಸುತ್ತಿದೆ.
ಮಹಾರಾಷ್ಟ್ರವು ಸಹ ಕರ್ನಾಟಕಕ್ಕೆ ಸೇವೆಗಳನ್ನು ನಿಲ್ಲಿಸಿ, ತನ್ನ ಕಾರ್ಯಾಚರಣೆಯನ್ನು ಎರಡು ರಾಜ್ಯಗಳ ಗಡಿ ಪ್ರದೇಶವಾದ ಕಾಗಲ್ ತಾಲೂಕಿಗೆ ಸೀಮಿತಗೊಳಿಸಿದೆ.
ಈ ಪ್ರಕರಣ ಇನ್ನೂ ಮುಂದುವರಿದು ಶನಿವಾರ ಕರ್ನಾಟಕದ ಚಿತ್ರದುರ್ಗದಲ್ಲಿ ಮಹಾರಾಷ್ಟ್ರ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿ ಅವನ ಮುಖಕ್ಕೆ ಕಪ್ಪು ಬಣ್ಣ ಬಳಿದಿದ್ದರು. ಇದಕ್ಕೆ ಪ್ರತೀಕಾರವಾಗಿ, ಮಹಾರಾಷ್ಟ್ರದ ಕೊಲ್ಲಾಪುರದ ಶಿವಸೇನೆ (ಯುಬಿಟಿ) ಕಾರ್ಯಕರ್ತರು ಕರ್ನಾಟಕದ ಬಸ್‌ಗೆ ಪಕ್ಷದ ಧ್ವಜಗಳನ್ನು ಕಟ್ಟಿ ಕೊಲ್ಲಾಪುರ ಕೇಂದ್ರ ಬಸ್ ನಿಲ್ದಾಣದಲ್ಲಿ ಕಪ್ಪು ಬಣ್ಣ ಬಳಿದಿದ್ದಾರೆ.