ಅನಾರೋಗ್ಯದಿಂದ ಕೊನೆಯುಸಿರಳೆದ ಆನಂದ ಮಾಮನಿ ನಿಧನಕ್ಕೆ ನಳಿನ್‍ಕುಮಾರ್ ಕಟೀಲ್ ಸಂತಾಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅನಾರೋಗ್ಯದಿಂದ ಕೊನೆಯುಸಿರೆಳೆದ ಸವದತ್ತಿ ಶಾಸಕ, ವಿಧಾನಸಭೆ ಉಪಸಭಾಪತಿ ಆನಂದ್ ಮಾಮನಿ(56) ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ಸಂತಾಪ ಸೂಚಿಸಿದ್ದಾರೆ. ಕೆಲ ದಿನಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಕಾರಣಾಂತರಗಳಿಂದ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಿಸದೆ ಮಾಮನಿ ಶನಿವಾರ ಮಧ್ಯರಾತ್ರಿ 12ಗಂಟೆ ಸುಮಾರಿಗೆ ನಿಧನರಾಗಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿಗೆ ಭದ್ರ ಬುನಾದಿ ಹಾಕಿದವರಲ್ಲಿ ಮುಂಚೂಣಿಯಲ್ಲಿದ್ದ ಮುಖಂಡ ಇವರು. ಅವರ ಅಕಾಲಿಕ ನಿಧನ ನನಗೆ ತೀವ್ರ ಆಘಾತವನ್ನುಂಟು ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ಸಂತಾಪ ಸೂಚಿಸಿದ್ದಾರೆ. ಸತತ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ, ಅಭಿಮಾನಿಗಳಿಂದ ಅಜಾತ ಶತ್ರುವೆಂದು ಕರೆಸಿಕೊಂಡಿದ್ದ ಅವರು ಮೃದು ಸ್ವಭಾವದಿಂದಾಗಿಯೇ ಜನಾನುರಾಗಿ ಆಗಿದ್ದರು.

ಶಾಸಕರಾಗಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ, ಯಲ್ಲಮ್ಮ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ, ಪ್ರಸಕ್ತ ವಿಧಾನಸಭೆ ಉಪಸಭಾಧ್ಯಕ್ಷರ ಹುದ್ದೆ ನಿಭಾಯಿಸುತ್ತಿದ್ದ ಮಾಮನಿ, ಸೋಲಿಲ್ಲದ ಸರದಾರ ಎನಿಸಿದ್ದರು. ‘ಸವದತ್ತಿ ಸಾಹುಕಾರ’, ‘ಜನಪರ ನಾಯಕ’ ಎಂಬ ಹಲವು ಅಂಕಿತಗಳೂ ಅವರದಾಗಿದ್ದವು. ಕ್ಷೇತ್ರದಲ್ಲಿ ನಿತ್ಯ ಪರ್ಯಟನೆ ಮಾಡುವ ಕ್ರಿಯಾಶೀಲತೆ, ಜನಪರ ನಿಲುವು, ಮುತ್ಸದ್ಧಿ ಗುಣಗಳಿಂದ ಅವರು ಆಪ್ತರಾಗಿದ್ದರು ಎಂದು ಸ್ಮರಿಸಿದ್ದಾರೆ.

ಇವರ ತಂದೆ, ದೊಡ್ಡಪ್ಪನ ಮಗನೂ ಶಾಸಕರಾಗಿದ್ದರು. ರಾಜಕೀಯ ಹಿರಿಮೆಯ ಕುಟುಂಬ ಇವರದಾಗಿತ್ತು. ಸವದತ್ತಿಯಲ್ಲಿ ಅಭಿವೃದ್ಧಿ ಪರ್ವ ಆರಂಭಿಸಿದ ಮಾಮನಿ ಬಿಜೆಪಿ ಭದ್ರವಾಗಿ ನೆಲೆಯೂರುವಂತೆ ಮಾಡಿದ್ದರು. ಇವರು ‘ಯರಗಟ್ಟಿ ತಾಲ್ಲೂಕಿನ ರೂವಾರಿ’ ಎಂದೇ ಜನರಿಂದ ಮೆಚ್ಚುಗೆ ಪಡೆದಿದ್ದರು ಎಂದು ನೆನಪಿಸಿದ್ದಾರೆ.

ಅವರ ಕುಟುಂಬಸ್ಥರಿಗೆ, ಕಾರ್ಯಕರ್ತರು ಮತ್ತು ಅಭಿಮಾನಿಗಳಿಗೆ ಭಗವಂತನು ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ನಳಿನ್‍ಕುಮಾರ್ ಕಟೀಲ್ ಪ್ರಾರ್ಥಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!