ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಸಂಗೀತ ಲೋಕದ ದಿಗ್ಗಜ ಗಾಯಕಿ ಆಶಾ ಭೋಸ್ಲೆ ಅವರ ಅಗಲಿಕೆಯಿಂದ ದೇಶಾದ್ಯಂತ ದುಃಖದ ವಾತಾವರಣ ನಿರ್ಮಾಣವಾಗಿದೆ. ಅಭಿಮಾನಿಗಳು, ಸಿನಿತಾರೆಯರು ಹಾಗೂ ರಾಜಕೀಯ ಗಣ್ಯರು ಸಂತಾಪ ಸೂಚಿಸುತ್ತಿರುವ ನಡುವೆಯೇ ನಟಿ ಅಥಿಯಾ ಶೆಟ್ಟಿ ಮಾಡಿದ ಒಂದು ಸಾಮಾಜಿಕ ಜಾಲತಾಣದ ಎಡವಟ್ಟು ಭಾರಿ ಟ್ರೋಲ್ ಗೆ ಕಾರಣವಾಗಿದೆ.
ಆಶಾ ಭೋಸ್ಲೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಉದ್ದೇಶದಿಂದ ಅಥಿಯಾ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಸಂತಾಪ ಸಂದೇಶ ಹಂಚಿಕೊಂಡಿದ್ದರು. ಆದರೆ ಅದರೊಂದಿಗೆ ತಪ್ಪಾಗಿ ಲತಾ ಮಂಗೇಶ್ಕರ್ ಅವರ ಫೋಟೋವನ್ನು ಪೋಸ್ಟ್ ಮಾಡಿರುವುದು ನೆಟ್ಟಿಗರ ಗಮನ ಸೆಳೆಯಿತು. ಈ ತಪ್ಪು ಕೆಲವೇ ನಿಮಿಷಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಹಲವರಿಂದ ಟೀಕೆಗೆ ಗುರಿಯಾಯಿತು.
ಇದನ್ನೂ ಓದಿ:
ತಪ್ಪು ಅರಿತ ತಕ್ಷಣ ಅಥಿಯಾ ಆ ಪೋಸ್ಟ್ ಅನ್ನು ಅಳಿಸಿ, ಬಳಿಕ ಆಶಾ ಭೋಸ್ಲೆ ಅವರ ಸರಿಯಾದ ಫೋಟೋ ಸಹಿತ ಮತ್ತೊಮ್ಮೆ ಸಂತಾಪ ಸೂಚಿಸಿದರು. ಆದರೂ ಮೊದಲ ಪೋಸ್ಟ್‌ನ ಸ್ಕ್ರೀನ್‌ಶಾಟ್‌ಗಳು ಈಗಾಗಲೇ ವ್ಯಾಪಕವಾಗಿ ಹಂಚಿಕೆಯಾಗಿದ್ದವು.
ಈ ಘಟನೆಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು, “ಇಂತಹ ಗಂಭೀರ ಸಂದರ್ಭಗಳಲ್ಲಿ ಹೆಚ್ಚು ಜಾಗ್ರತೆ ಅಗತ್ಯ” ಎಂದು ಅಭಿಪ್ರಾಯಪಟ್ಟಿದ್ದಾರೆ. ಕೆಲವರು ಇದನ್ನು ಬೇಜವಾಬ್ದಾರಿತನ ಎಂದು ಟೀಕಿಸಿದರೆ, ಮತ್ತಷ್ಟು ಮಂದಿ ಹಿರಿಯ ಕಲಾವಿದರ ಬಗ್ಗೆ ಕನಿಷ್ಠ ಗೌರವ ಮತ್ತು ಅರಿವು ಇರಬೇಕು ಎಂದು ಹೇಳಿದ್ದಾರೆ.



