ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಆಂತರಿಕ ಭದ್ರತೆಗೆ ಧಕ್ಕೆ ತರುವಂತಹ ಗಂಭೀರ ಪ್ರಕರಣವೊಂದು ಕಲಬುರಗಿಯಲ್ಲಿ ಬೆಳಕಿಗೆ ಬಂದಿದೆ. ಪಾಕಿಸ್ತಾನ ಹಾಗೂ ಅಂತಾರಾಷ್ಟ್ರೀಯ ಉಗ್ರ ಸಂಘಟನೆ ಐಸಿಸ್ (ISIS) ಜತೆ ಸಾಮಾಜಿಕ ಜಾಲತಾಣಗಳ ಮೂಲಕ ನಿರಂತರ ಸಂಪರ್ಕದಲ್ಲಿದ್ದ ಗಂಭೀರ ಆರೋಪದ ಮೇಲೆ ಇಬ್ಬರು ಶಂಕಿತರನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (UP ATS) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕೇಂದ್ರ ಗುಪ್ತಚರ ಇಲಾಖೆ ನೀಡಿದ ನಿಖರವಾದ ಮಾಹಿತಿಯ ಆಧಾರದ ಮೇಲೆ ಈ ಜಂಟಿ ಕಾರ್ಯಾಚರಣೆ ನಡೆದಿದೆ.
ಮಾಂಸದ ಫ್ಯಾಕ್ಟರಿಯಲ್ಲಿ ಅಡಗಿದ್ದ ಶಂಕಿತರು
ವಶಕ್ಕೆ ಒಳಗಾದ ಆರೋಪಿಗಳನ್ನು ಉತ್ತರ ಪ್ರದೇಶ ಮೂಲದ ಮೊಹಮ್ಮದ್ ಸಮೀರ್ ಮತ್ತು ಸಲ್ಮಾನ್ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಕಲಬುರಗಿ ತಾಲೂಕಿನ ಮಾಲಗತ್ತಿ ಹಾಗೂ ಉಪಳಾಂವ್ ಗ್ರಾಮದ ಹೊರವಲಯದಲ್ಲಿರುವ ‘ಫೇರ್ ಎಕ್ಸ್ ಪೋರ್ಟ್ಸ್’ ಎಂಬ ಮಾಂಸ ರಫ್ತು ಮಾಡುವ ಕಾರ್ಖಾನೆಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಕಣ್ಣಿಗೆ ಸಾಮಾನ್ಯ ಕಾರ್ಮಿಕರಂತೆ ಕಾಣುತ್ತಿದ್ದ ಇವರು, ಒಳಗೊಳಗೆ ದೇಶವಿರೋಧಿ ಸಂಚಿನಲ್ಲಿ ಭಾಗಿಯಾಗಿದ್ದರು ಎಂಬ ಆಘಾತಕಾರಿ ಮಾಹಿತಿ ಹೊರಬಂದಿದೆ.
ಸೋಶಿಯಲ್ ಮೀಡಿಯಾ ಮೂಲಕ ಉಗ್ರರ ನಂಟು
ಪೊಲೀಸ್ ಮೂಲಗಳ ಪ್ರಕಾರ, ಅಂತರರಾಜ್ಯ ಸೋಷಿಯಲ್ ಮೀಡಿಯಾ ಮಾನಿಟಿರಿಂಗ್ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಜಾಲ ಪತ್ತೆಯಾಗಿದೆ. ಪಾಕಿಸ್ತಾನದ ವ್ಯಕ್ತಿಗಳು ನಿರ್ವಹಿಸುತ್ತಿದ್ದ ಫೇಸ್‌ಬುಕ್ ಪೇಜ್‌ಗಳು ಹಾಗೂ ವಿವಿಧ ದೇಶವಿರೋಧಿ ಜಾಲತಾಣಗಳ ಜತೆ ಆರೋಪಿ ಸಮೀರ್ ನಿರಂತರ ಸಂಪರ್ಕದಲ್ಲಿದ್ದದ್ದು ತನಿಖೆಯಲ್ಲಿ ದೃಢಪಟ್ಟಿದೆ. ಇವರು ವಾಟ್ಸಾಪ್ ಕರೆಗಳು ಹಾಗೂ ಫೇಸ್‌ಬುಕ್ ಮೆಸೆಂಜರ್ ಮೂಲಕ ಐಸಿಸ್ ಉಗ್ರರೊಂದಿಗೆ ನಿರಂತರವಾಗಿ ಇನ್‌ಪುಟ್‌ಗಳನ್ನು ಹಂಚಿಕೊಳ್ಳುತ್ತಿದ್ದರು ಎಂದು ಶಂಕಿಸಲಾಗಿದೆ.
ಕೋಣೆಯಲ್ಲಿ ಸಿಕ್ಕಿದವು ರಹಸ್ಯ ಮ್ಯಾಪ್‌ಗಳು
ಎಟಿಎಸ್ ಅಧಿಕಾರಿಗಳು ಮತ್ತು ಕಲಬುರಗಿ ಪೊಲೀಸರು ಜಂಟಿಯಾಗಿ ದಾಳಿ ನಡೆಸಿದ ಸಂದರ್ಭದಲ್ಲಿ, ಆರೋಪಿ ಸಮೀರ್ ಉಳಿದುಕೊಂಡಿದ್ದ ಕೊಠಡಿಯಲ್ಲಿ ಕೆಲವು ಪ್ರಮುಖ ಮ್ಯಾಪ್‌ಗಳು ಪತ್ತೆಯಾಗಿವೆ. ಈ ಮ್ಯಾಪ್‌ಗಳು ಭಾರತದ ಪ್ರಮುಖ ರಕ್ಷಣಾ ನೆಲೆಗಳು ಅಥವಾ ಸೂಕ್ಷ್ಮ ಪ್ರದೇಶಗಳಿಗೆ ಸಂಬಂಧಿಸಿದ್ದೇ ಎಂಬ ಆತಂಕ ಮೂಡಿದ್ದು, ಅಧಿಕಾರಿಗಳು ಅವುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ:
ಅಜ್ಞಾತ ಸ್ಥಳದಲ್ಲಿ ತೀವ್ರ ವಿಚಾರಣೆ
ಈ ಕುರಿತು ಕಲಬುರಗಿಯ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಪ್ರಕರಣ ದಾಖಲಾಗಿದೆ. ವಶದಲ್ಲಿರುವ ಇಬ್ಬರಲ್ಲಿ ತನಿಖೆಯ ವೇಳೆ ಸಲ್ಮಾನ್ ಎಂಬಾತನ ಪಾತ್ರ ಕಂಡುಬರದ ಹಿನ್ನೆಲೆಯಲ್ಲಿ ಆತನನ್ನು ಅಧಿಕಾರಿಗಳು ಬಿಟ್ಟು ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ವಶದಲ್ಲಿರುವ ಮೊಹಮ್ಮದ್ ಸಮೀರ್‌ನನ್ನು ಅಧಿಕಾರಿಗಳು ಅಜ್ಞಾತ ಸ್ಥಳದಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಈತನ ಜಾಲ ಎಲ್ಲೆಲ್ಲಾ ಹರಡಿದೆ ಮತ್ತು ಈತ ಪಾಕಿಸ್ತಾನಕ್ಕೆ ಭಾರತದ ಆಂತರಿಕ ಭದ್ರತೆಯ ಯಾವುದೇ ಸೂಕ್ಷ್ಮ ಮಾಹಿತಿಗಳನ್ನು ರವಾನಿಸಿದ್ದನೇ ಎಂಬ ಕುರಿತು ತನಿಖೆ ಚುರುಕುಗೊಂಡಿದೆ.



