ಹೊಸ ದಿಗಂತ ವರದಿ, ಮಡಿಕೇರಿ:
ಚಿಕ್ಕಮಗಳೂರಿನ ಯುವ ವಕೀಲ ಪ್ರೀತಂ ಅವರ ಮೇಲೆ ಚಿಕ್ಕಮಗಳೂರಿನ ಪೊಲೀಸ್ ಸಿಬ್ಬಂದಿಗಳು ವಿನಾಕಾರಣ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಮತ್ತು ಘಟನೆಯನ್ನು ಖಂಡಿಸಿ ಮಡಿಕೇರಿ ವಕೀಲರ ಸಂಘ ಪ್ರತಿಭಟನೆ ನಡೆಸಿತು.
ರಾಜ್ಯಾದ್ಯಂತ ಹಿರಿಯ ಹಾಗೂ ಕಿರಿಯ ವಕೀಲರು ಹಲ್ಲೆಯನ್ನು ಖಂಡಿಸಿ ನ್ಯಾಯಾಲಯದ ಕಲಾಪಗಳಿಂದ ಸ್ವಯಂ ಪ್ರೇರಿತವಾಗಿ ಹೊರ ಉಳಿದು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಮಡಿಕೇರಿಯಲ್ಲೂ ಬೆಂಬಲ ವ್ಯಕ್ತವಾಯಿತು. ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಎಂ.ಎ.ನಿರಂಜನ್ ಮಾತನಾಡಿ, ಯುವ ವಕೀಲರ ಮೇಲೆ ನಡೆದ ಹಲ್ಲೆ ಖಂಡನೀಯ.
ವಕೀಲರು ಸಮಾಜದ ಅಭಿರಕ್ಷಕರು, ಇವರನ್ನೇ ಪೊಲೀಸ್ ಇಲಾಖೆಯವರು ಹೀಗೆ ನಡೆಸಿಕೊಂಡರೆ ಇನ್ನು ಸಾಮಾನ್ಯ ಜನರ ಗತಿ ಏನು ಎಂದು ಪ್ರಶ್ನಿಸಿದರು. ಪ್ರಕರಣ ದಾಖಲಾದರೂ ಆರೋಪಿಗಳನ್ನು ಬಂಧಿಸದೇ ಇರುವುದು ಸರಿಯಲ್ಲ. ಘಟನೆಯ ಗಂಭೀರತೆ ಅರಿತ ರಾಜ್ಯ ಸರ್ಕಾರ ಆರೋಪಿಗಳನ್ನು ಸೇವೆಯಿಂದ ಅಮಾನತು ಮಾಡಿದೆ. ಆದರೆ ಇನ್ನೂ ಕೂಡಾ ಅರೋಪಿಗಳ ಬಂಧನವಾಗಿಲ್ಲ, ತಕ್ಷಣ ತಪ್ಪಿತಸ್ಥರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎನ್ನುವುದು ರಾಜ್ಯದ ವಕೀಲರ ಆಗ್ರಹವಾಗಿದೆ ಎಂದು ನಿರಂಜನ್ ತಿಳಿಸಿದರು