ಅಭಿವೃದ್ಧಿ ಕೆಲಸಗಳಲ್ಲಿ ದೂರುಗಳು ಬಾರದ ರೀತಿಯಲ್ಲಿ ಕೆಲಸ ಮಾಡಿ : ಅಧಿಕಾರಿಗಳಿಗೆ ಶಾಸಕ ಪ್ರಭು ಚವ್ಹಾಣ್ ಎಚ್ಚರಿಕೆ

ಹೊಸ ದಿಗಂತ ವರದಿ, ಬೀದರ:

ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಶನಿವಾರ ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕಿನ ನಂದಿ ಬಿಜಲಗಾಂವ, ಅಕನಾಪೂರ, ಚುಂಬುಲೇವಾಡಿ, ಭೋಪಾಳಘಡ, ಕರಕ್ಯಾಳ, ಲಿಂಗದಳ್ಳಿ(ಯು), ಕರ‍್ಯಾಳ, ಹೊರಂಡಿ, ಕೊಟಗ್ಯಾಳ, ಕಾರಂಜಾ ತಾಂಡಾ, ರಾಮಚಂದ್ರ ತಾಂಡಾ, ಶಂಕರತಾಂಡಾ, ಮುಧೋಳ(ಬಿ) ಸೇರಿದಂತೆ 13ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸಂಚರಿಸಿ ಚಾಲ್ತಿಯಲ್ಲಿರುವ ಅಭಿವೃದ್ಧಿ ಕೆಲಸಗಳನ್ನು ಪರಿಶೀಲಿಸಿದರು.

ಕೆಲವು ಗ್ರಾಮಗಳಲ್ಲಿ ಕಾಮಗಾರಿ ಕುರಿತಂತೆ ಗ್ರಾಮಸ್ಥರು ದೂರು ನೀಡಿದಾಗ ಶಾಸಕರು, ಸಂಬಂಧಿಸಿದ ಗುತ್ತಿಗೆದಾರರು ಮತ್ತು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮ ವಹಿಸಿ ಅನುದಾನ ತರಲಾಗಿದೆ. ಎಲ್ಲ ಕಾಮಗಾರಿಗಳು ಗುಣಮಟ್ಟದಿಂದ ಆಗಬೇಕು ಅಭಿವೃದ್ಧಿ ಕೆಲಸಗಳ ಕುರಿತಂತೆ ಎಲ್ಲಿಯೂ ದೂರುಗಳು ಬಾರದ
ರೀತಿಯಲ್ಲಿ ಕೆಲಸ ಮಾಡಬೇಕೆಂದು ಸೂಚಿಸಿದರು.

ಮುಧೋಳ(ಬಿ) ಗ್ರಾಮದಲ್ಲಿ ಕೆಲವು ಮನೆಗಳಿಗೆ ಸಂಚರಿಸಿ ಜಲ ಜೀವನ್ ಮಿಷನ್ ಕಾಮಗಾರಿಯನ್ನು ವೀಕ್ಷಿಸಿದರು. ನಲ್ಲಿಯಿಂದ ನೀರು ಬರುವುದನ್ನು ಕಂಡು ಮಹಿಳೆಯರಿಂದ ವಿವರಣೆ ಪಡೆದರು. ಗ್ರಾಮದಲ್ಲಿ ಹಿಂದೆ ಕುಡಿಯುವ ನೀರಿಗೆ ಸಾಕಷ್ಟು ತಾಪತ್ರಯವಿತ್ತು. ಜಲ ಜೀವನ್ ಮಿಷನ್ ಯೋಜನೆ ಜಾರಿಗೊಳಿಸಿದ ನಂತರ ನೀರಿನ ಸಮಸ್ಯೆ ಇತ್ಯರ್ಥಗೊಂಡಿದೆ. ನೀರಿಗಾಗಿ ಬೀದಿ-ಬೀದಿಯಲ್ಲಿ ಅಲೆಯುವುದು ತಪ್ಪಿದೆ. ಪ್ರತಿ ಮನೆಗೂ ನೀರು ಸರಬರಾಜು ಆಗುತ್ತಿದೆ. ಗ್ರಾಮದಲ್ಲಿ ಈ ಯೋಜನೆ ಜಾರಿಗೊಳಿಸಿದ ಶಾಸಕರಿಗೆ ಗ್ರಾಮದ ಮಹಿಳೆಯರು ಧನ್ಯವಾದ ಸಲ್ಲಿಸಿದರು.

ಕೆಲಸ ಚಾಲ್ತಿಯಲ್ಲಿರುವ ಎಲ್ಲ ಗ್ರಾಮಗಳಲ್ಲಿ ಕಾಮಗಾರಿಯ ಬಗ್ಗೆ ಯಾವುದೇ ರೀತಿಯ ದೂರುಗಳು ಬಾರದ ರೀತಿಯಲ್ಲಿ ಕೆಲಸವಾಗಬೇಕು. ಈ ಯೋಜನೆ ಮಹಿಳೆಯರ ಅನುಕೂಲಕ್ಕಾಗಿ ಇದೆ. ಮಹಿಳೆಯರು ತಮ್ಮ ಮನೆಗೆ ನೀರು ಪೂರೈಕೆಯಾಗುವುದನ್ನು ಕಂಡು ಸಂತೋಷಪಡಬೇಕು. ಹಾಗಾದಲ್ಲಿ ಮಾತ್ರ ಈ ಯೋಜನೆ ಯಶಸ್ವಿಯಾದಂತಾಗುತ್ತದೆ ಎಂದರು.

ಕೆಲವು ಗ್ರಾಮಗಳಲ್ಲಿ ಅಶುಚಿತ್ವವನ್ನು ಕಂಡು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡರು. ಅಶುಚಿತ್ವದಿಂದಾಗಿ ಸೊಳ್ಳೆಗಳ ಹಾವಳಿ ಹೆಚ್ಚಾಗಿ ನಾನಾ ರೀತಿಯ ಸಾಂಕ್ರಾಮಿಕ ರೋಗಗಳು ಜನರನ್ನು ಬಾಧಿಸುತ್ತವೆ. ಹಾಗಾಗಿ ಗ್ರಾಮಗಳನ್ನು ಶುಚಿಯಾಗಿಡುವುದಕ್ಕೆ ಮೊದಲ ಆದ್ಯತೆ ನೀಡಬೇಕು. ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿನ ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಬೇಕು. ಮತ್ತು ಪರಿಹರಿಸಬೇಕೆಂದು ತಿಳಿಸಿದರು.

ಕುಡಿಯುವ ನೀರು, ರಸ್ತೆ, ಚರಂಡಿ, ಅಂಗನವಾಡಿ ಕಟ್ಟಡ ಹೀಗೆ ಪ್ರತಿ ಗ್ರಾಮದಲ್ಲಿಯೂ ಒಂದಿಲ್ಲಂದು ರೀತಿಯ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಎಲ್ಲ ಕೆಲಸಗಳು ಗುಣಮಟ್ಟದಿಂದ ಆಗಬೇಕು. ಜನರಿಂದ ಯಾವುದೇ ರೀತಿಯ ದೂರುಗಳು ಬಾರದ ರೀತಿಯಲ್ಲಿ ಕೆಲಸ ಮಾಡಬೇಕು. ಒಂದು ವೇಳೆ ದೂರುಗಳು ಕಂಡುಬoದರೆ ಗುತ್ತಿಗೆದಾರರು ಮತ್ತು ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಸಿದರು.

ಈ ಸಂದರ್ಭ ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಸತೀಷ ಪಾಟೀಲ, ದೊಂಡಿಬಾ ನರೋಟೆ, ಸಚಿನ್ ರಾಠೋಡ್, ರಾಜು ಶೆಳ್ಕೆ, ಸಚಿನ ಬಿರಾದಾರ, ಬಂಟಿ ರಾಂಪೂರೆ, ಉದಯ ಸೋಲಾಪೂರೆ, ಬಾಲಾಜಿ ವಾಗಮಾರೆ, ಗಜಾನಂದ ವಟಗೆ, ಧನರಾಜ ಗುಡ್ಡಾ, ಭರತ ಕದಮ್, ಬಾಳಾ ಪಾಟೀಲ, ಸಂಜು ಮುರ್ಕೆ, ಗಿರೀಶ ವಡೆಯರ್, ಅವಿನಾಶ ಪಾಟೀಲ ಹಾಗೂ ಇತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!