ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುತ್ತೆ ಎಂದು ಕರ್ನಾಟಕ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಹಲ್ಲೆಗೊಳಗಾದ ಕಂಡಕ್ಟರ್ ಮಹಾದೇವ ಹುಕ್ಕೇರಿ ಅವರ ಆರೋಗ್ಯ ವಿಚಾರಿಸಲು ರಾಮಲಿಂಗಾ ರೆಡ್ಡಿ ಬೆಳಗಾವಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಸರ್ಕಾರಿ ಸ್ವಾಮ್ಯದ ಕಂಪನಿ ಕಳೆದ 65 ವರ್ಷಗಳಿಂದ ಯಾವೊಂದು ಲೈಂಗಿಕ ಕಿರುಕುಳದ ಆರೋಪಗಳಿಲ್ಲದೆ ಕಾರ್ಯನಿರ್ವಹಿಸುತ್ತಿದೆ. ಈ ರೀತಿ ಪ್ರಕರಣ ದಾಖಲಿಸುವ ಮುಂಚೆ ಪೊಲೀಸರು ಈ ಸಾಮಾನ್ಯ ಜ್ಞಾನವನ್ನು ಅರ್ಥ ಮಾಡಿಕೊಳ್ಳಬೇಕಿತ್ತು ಎಂದು ಅವರು ಟೀಕಿಸಿದರು.
ಹುಕ್ಕೇರಿ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ ಮತ್ತು ಅವರನ್ನು ಎರಡು ದಿನಗಳಲ್ಲಿ ಬಿಡುಗಡೆ ಮಾಡಬಹುದು ಎಂದು ಸಚಿವರು ಮಾಹಿತಿ ನೀಡಿದರು.
ಹುಕ್ಕೇರಿ ಅವರ ಮೇಲೆ ಹಾಕಿರೋ ಪೋಕ್ಸೋ ಪ್ರಕರಣವನ್ನು ಹಿಂಪಡೆಯಲು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರೊಂದಿಗೆ ಚರ್ಚಿಸುವುದಾಗಿಯೂ ಹಾಗೂ ಕಂಡಕ್ಟರ್ ಮೇಲಿನ ಹಲ್ಲೆಯನ್ನು ಸಮರ್ಥಿಸಲು ವೀಡಿಯೊಗಳನ್ನು ನಿರ್ಮಿಸಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡುತ್ತಿರುವ ಎಂಇಎಸ್ ನಾಯಕರ ವಿರುದ್ಧ ಕ್ರಮ ಕೈಗೊಳ್ಳಲು ಬೆಳಗಾವಿ ಪೊಲೀಸ್ ಆಯುಕ್ತರೊಂದಿಗೆ ವೈಯಕ್ತಿಕವಾಗಿ ಮಾತನಾಡುವುದಾಗಿ ರಾಮಲಿಂಗಾ ರೆಡ್ಡಿ ಹೇಳಿದರು.