ಹೊಸದಿಗಂತ ವರದಿ, ಬಾಗಲಕೋಟೆ:
ಕೆರೂರು ಪಟ್ಟಣದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಬಾದಾಮಿ ಸಿಪಿಐ ಕರಿಯಪ್ಪ ಬನ್ನೆ ಅವರನ್ನು ಅಮಾನತ್ತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ ಆದೇಶ ಹೊರಡಿಸಿದ್ದಾರೆ.
ಕೆರೂರ ಪಟ್ಟಣದಲ್ಲಿ ಸೆ.6ರಂದು ಗಣೇಶ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ನಡೆದ ಸಣ್ಣ ಘಟನೆಯ ಕುರಿತಾಗಿ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಕಾರ್ಯದರ್ಶಿ ಶರಣಬಸವ ಸಜ್ಜನ ಸೇರಿದಂತೆ ಇತರರನ್ನು ಠಾಣೆಗೆ ಕರೆಸಿ ಅವಾಚ್ಯ ಶಬ್ಧದಿಂದ ನಿಂದಿಸಿ, ಹಲ್ಲೆ, ದೌರ್ಜನ್ಯ ಎಸಗಿ ಹಿಂಸಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು.
ಬಾದಾಮಿ ಸಿಪಿಐ ಸೇರಿದಂತೆ ಇನ್ನಿತರ ಅಧಿಕಾರಿಗಳನ್ನು ಅಮಾನತ್ತಿನಲ್ಲಿಟ್ಟು ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಕೆರೂರ ಪಟ್ಟಣದ ಹಿಂದೂ ಸಂಘಟನೆಗಳ ಕಾರ್ಯಕರ್ತರು ದೊಡ್ಡಮಟ್ಟದ ಹೋರಾಟವನ್ನು ನಡೆಸಿದ್ದರು. ಬಾದಾಮಿ ಸಿಪಿಐ ಅವರು ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ಹಲ್ಲೆ, ದೌರ್ಜನ್ಯ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದರಿಂದ ಅವರನ್ನು ಅಮಾನತ್ತಿನಲ್ಲಿಟ್ಟು ಎಸ್ಪಿಯವರು ಆದೇಶ ಹೊರಡಿಸಿದ್ದಾರೆ.
ಕರಿಯಪ್ಪ ಬನ್ನೆ ಅವರ ವಿರುದ್ಧದ ವಿಚಾರಣೆಯನ್ನು ಬಾಕಿಯಿಟ್ಟು ಅಮಾನತು ಆದೇಶ ಮಾಡಲಾಗಿದೆ. ಅಮಾನತ್ತಿನ ಅವಧಿಯಲ್ಲಿ ಕೇಂದ್ರ ಸ್ಥಾನ ಬಿಟ್ಟು ತೆರಳದಂತೆ ಆದೇಶದಲ್ಲಿ ತಿಳಿಸಲಾಗಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ