ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮ ಸೇನೆ ಕಾರ್ಯಕರ್ತರು ಏಕಾಏಕಿ ಮಸಾಜ್ ಸೆಂಟರ್ ಮೇಲೆ ದಾಳಿ ನಡೆಸಿರುವ ಘಟನೆ ಮಂಗಳೂರಿನ ಬಿಜೈ ಬಳಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ದಾಳಿ ನಡೆಸಿದವರನ್ನು ಕೂಡಲೇ ಬಂಧಿಸುವಂತೆ ಗೃಹ ಸಚಿವ ಜಿ ಪರಮೇಶ್ವರ್ ಸೂಚನೆ ನೀಡಿದ ಬೆನ್ನಲ್ಲೆ ರಾಮಸೇನೆ ಸಂಸ್ಥಾಪಕ ಪ್ರಸಾದ್ ಅತ್ತಾವರ ಸಂಸ್ಥಾಪಕ ಸಹಿತ 14 ಮಂದಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಮಂಗಳೂರು ಹೊರವಲಯದ ಕುಡುಪು ಮನೆಯಲ್ಲಿದ್ದ ಅವರನ್ನು, ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದಕ್ಕೂ ಮುನ್ನ ಮಸಾಜ್ ಪಾರ್ಲರ್‌ಗೆ ಕಾನೂನು ಸುವ್ಯವಸ್ಥೆ ಡಿಸಿಪಿ ಸಿದ್ದಾರ್ಥ್ ಗೋಯಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಪ್ರಸಾದ್ ಅತ್ತಾವರ ನೇತೃತ್ವದ ಸಂಘಟನೆಯ ಹತ್ತು ಜನ ಕಾರ್ಯಕರ್ತರು ಬಿಜೈ ಕೆಎಸ್‍ಆರ್‌ಟಿಸಿ ಬಳಿಯ ಕಲರ್ಸ್ ಯೂನಿಸೆಕ್ಸ್ ಸೆಲೂನ್ ಮೇಲೆ ದಾಳಿ ನಡೆಸಿದ್ದರು. ಸೆಲೂನ್‍ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಕಾರ್ಯಕರ್ತರು ಆರೋಪಿಸಿದ್ದರು.