ಹೊಸದಿಗಂತ ಯಲ್ಲಾಪುರ:
ದರೋಡೆಕೋರರನ್ನು ಬಂಧಿಸಲು ಹೋಗಿದ್ದ ಪೊಲೀಸರ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದು, ಪೊಲೀಸರು ಅವರ ಕಾಲಿಗೆ ಗುಂಡು ಹೊಡೆದು ಬಂಧಿಸಿದ ಘಟನೆ ತಾಲೂಕಿನ ಡೌಗಿನಾಳ ಬಳಿ ನಡೆದಿದೆ.
ಮುಂಡಗೋಡ ಜಮೀರ ಅಹ್ಮದ್ ದುರ್ಗಾವಳೆಯನ್ನು ಅಪಹರಿಸಿ, ದುಷ್ಕೃತ್ಯಕಾರರು 35ಲಕ್ಷ ರೂ.ಬೇಡಿಕೆ ಇಟ್ಟಿದ್ದರು.ನಂತರ 18ಲಕ್ಷ ರೂ ಪಡೆದು ಎಚ್ಚರಿಕೆ ನೀಡಿ ಅವರನ್ನು ಬಿಟ್ಟಿದ್ದರು .ಈ ಪ್ರಕರಣದಲ್ಲಿ ಪೊಲೀಸರು ಶುಕ್ರವಾರ ನಾಲ್ವರನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಇನ್ನಷ್ಟು ಆರೋಪಿಗಳಿದ್ದಾರೆ ಎಂಬ ಮಾಹಿತಿ ಹಿನ್ನೆಲೆ, ಮುಂಡಗೋಡು ಪೊಲೀಸರು ದುಷ್ಕೃತ್ಯಕಾರರನ್ನು ಕಲಘಟಗಿಯಿಂದ ಬೆನ್ನಟ್ಟುತ್ತಿದ್ದರು. ಯಲ್ಲಾಪುರ ಪೊಲೀಸರು ಡೌಗಿನಾಳ ಬಳಿ ಈ ತಂಡವನ್ನು ತಡೆದರು.
ಪೊಲೀಸರು ಐವರಿಗೂ ಶರಣಾಗುವಂತೆ ಎಚ್ಚರಿಸಿದರು. ಇದಕ್ಕೆ ಒಪ್ಪದೆ, ದುಷ್ಕರ್ಮಿಗಳು ಪೊಲೀಸರ ಮೇಲೆ ಕಲ್ಲು ತೂರಿದರು.ಚಾಕು ಮತ್ತು ಸ್ಫೋಟಕ ಪದಾರ್ಥಗಳಿಂದ ದಾಳಿ ಮಾಡಿದರು. ಪ್ರತಿಯಾಗಿ, ಪೊಲೀಸರು ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.ಆದರೂ ಅವರು ಶರಣಾಗಲು ಒಪ್ಪಂದ ಕಾರಣ, ಇಬ್ಬರ ಕಾಲಿಗೆ ಗುಂಡು ಹೊಡೆದು ಆರೋಪಿಗಳನ್ನ ಬಂಧಿಸಿದ್ದಾರೆ. ಬಳಿಕ ಐವರು ಆರೋಪಿಗಳನ್ನು ಬಂಧಿಸಲಾಯಿತು. ದುಷ್ಕರ್ಮಿಗಳು ಮತ್ತು ಪೊಲೀಸರ ನಡುವೆ ನಡೆದ ಸಂಘರ್ಷದಲ್ಲಿ ಮೂವರು ಪೊಲೀಸರಿಗೆ ಗಾಯಗಳಾಗಿವೆ.ಮುಂಡಗೋಡು ಸಿಪಿಐ ರಂಗನಾಥ ನೀಲಮ್ಮನವರ್, ಪಿಎಸ್‌ಐ ಪರಶುರಾಮ ಮತ್ತು ಯಲ್ಲಾಪುರದ ಪೊಲೀಸ ಸಿಬ್ಬಂದಿ ಶಫಿ ಗಾಯಗೊಂಡಿದ್ದಾರೆ. ಗುಂಡು ಹೊಡೆತದಿಂದ ಗಾಯಗೊಂಡಿದ್ದ ಆರೋಪಿಗಳಲ್ಲಿ ಇಬ್ಬರು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದರು ಮತ್ತು ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಗೊಂಡಿದ್ದರು.
ಈ ಐವರು ದುಷ್ಕರ್ಮಿಗಳಲ್ಲಿ ಇಬ್ಬರ ಕಾಲಿಗೆ ಗುಂಡು ತಗುಲಿದೆ, ಅವರನ್ನು ಕಾರವಾರದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.