ಹೊಸದಿಗಂತ ಡಿಜಿಟಲ್ ಡೆಸ್ಕ್;
ಉತ್ತರ ಪ್ರದೇಶದ ಪೊಲೀಸರು ರೇವ್ ಪಾರ್ಟಿಯೊಂದರ ಮೇಲೆ ದಾಳಿ ನಡೆಸಿ ಅಪ್ರಾಪ್ತರು ಸೇರಿ ಸುಮಾರು 39 ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ.
ನೋಯ್ಡಾ ಸೆಕ್ಟರ್-94ರ ಐಷಾರಾಮಿ ಸೊಸೈಟಿಯ ಫ್ಲ್ಯಾಟ್‌ನಲ್ಲಿ ರೇವ್ ಪಾರ್ಟಿ ಮಾಡಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಫ್ಲ್ಯಾಟ್‌ನಲ್ಲಿ ಅನೇಕ ಮದ್ಯದ ಬಾಟಲಿ ಪತ್ತೆಯಾಗಿದೆ. ಬಂಧಿತರು ಪ್ರತಿಷ್ಠಿತ ವಿಶ್ವವಿದ್ಯಾಲಯವೊಂದರ ವಿದ್ಯಾರ್ಥಿಗಳು. ಅವರ ವಯಸ್ಸು 16ರಿಂದ 20 ವರ್ಷ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ ಫ್ಲ್ಯಾಟ್‌ನಿಂದ ಹೆಚ್ಚಿನ ಸಂಖ್ಯೆಯ ಹರಿಯಾಣ ಲೇಬಲ್ ಮಾಡಿದ ಮದ್ಯದ ಬಾಟಲಿಗಳು ಮತ್ತು ಹುಕ್ಕಾಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಚಾರಣೆಯ ಸಮಯದಲ್ಲಿ, ವಿದ್ಯಾರ್ಥಿಗಳನ್ನು ವಾಟ್ಸ್‌ಆ್ಯಪ್ ಮೂಲಕ ಪಾರ್ಟಿಗೆ ಆಹ್ವಾನಿಸಲಾಗಿದೆ ಎಂಬ ವಿಚಾರ ತಿಳಿದುಬಂದಿದೆ. ಪ್ರವೇಶ ಶುಲ್ಕವು ಪ್ರತಿ ಮಹಿಳೆಗೆ 500 ರೂ., ಜೋಡಿಗೆ 800 ರೂ. ಮತ್ತು ಪುರುಷರಿಗೆ 1,000 ರೂ. ನಿಗದಿಪಡಿಸಲಾಗಿತ್ತು. 6 ಗಂಟೆಗೆ ಪಾರ್ಟಿ ನಡೆಯಲಿದೆ ಎಂದು ವಾಟ್ಸ್‌ಆ್ಯಪ್ ಸಂದೇಶದಲ್ಲಿ ತಿಳಿಸಲಾಗಿತ್ತು.
ಪಾನಮತ್ತ ವಿದ್ಯಾರ್ಥಿಗಳು ಪಾರ್ಟಿ ಮಾಡಿದ ಬಳಿಕ ಅತಿರೇಕದಿಂದ ವರ್ತಿಸಿ ಗಲಾಟೆ ಮಾಡಿದ್ದಾರೆ ಎನ್ನುವ ದೂರು ಕೇಳಿ ಬಂದಿದೆ. ಎಲ್ಲೆಂದರಲ್ಲಿ ಬಾಟಲಿ ಎಸೆದು ರಾದ್ಧಾಂತ ಮಾಡಿದ್ದಾರೆ ಎಂದು ಅಕ್ಕ ಪಕ್ಕದ ಫ್ಲ್ಯಾಟ್ ನಿವಾಸಿಗಳು ಆರೋಪಿಸಿದ್ದಾರೆ.