ಹೊಸದಿಗಂತ ಡಿಜಿಟಲ್ ಡೆಸ್ಕ್:
ತನ್ನ ರಕ್ಷಣೆಗೆಂದು ಬಂದ ಅಗ್ನಿಶಾಮಕದಳದ ಸಿಬ್ಬಂದಿಗಳ ಮೇಲೆಯೇ ಬೆಕ್ಕೊಂದು ಅಟ್ಯಾಕ್ ಮಾಡಿರುವ ವಿಲಕ್ಷಣಕಾರಿ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ತೆಂಕಿಲ ಕ್ರಾಸ್ ಬಳಿ ನಡೆದಿದೆ.
ಈ ಘಟನೆಯಲ್ಲಿ ಅಗ್ನಿಶಾಮಕ ದಳದ ಸಿದ್ದರೂಢ ಮತ್ತು ಮೌನೇಶ್ ಎಂಬವರ ಕೈಗಳಿಗೆ ಗಾಯಗಳಾಗಿವೆ.
ನಿನ್ನೆ ತೆಂಕಿಲ ಬಳಿಯ ಲಕ್ಷ್ಮೀ ಎಂಬವರ ಮನೆಯ ಬಾವಿಗೆ ಬೆಕ್ಕು ಬಿದ್ದಿತ್ತು. ಅದರಂತೆ ಇಂದು ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಕ್ಕಿನ ರಕ್ಷಣೆಗೆಂದು ಧಾವಿಸಿದ್ದರು. ಬೆಕ್ಕನ್ನು ಹಿಡಿಯಲು ಬಾವಿಯೊಳಗಡೆ ಸಿದ್ಧರೂಢ ಮತ್ತು ಮೌನೇಶ್ ಎಂಬವರು ಇಳಿದಿದ್ದರು. ಬಾವಿಯೊಳಗಿನ ಒಂದು ಬಿಲದೊಳಗೆ ಬೆಕ್ಕು ಅವಿತುಕೊಂಡಿತ್ತು. ಬೆಕ್ಕನ್ನು ಹಿಡಿಯಲು ಪ್ರಯತ್ನಿಸಿದಾಗ ಏಕಾಏಕಿ ಅಗ್ನಿಶಾಮಕದಳದ ಇಬ್ಬರ ಮೇಲೆ ಎರಗಿ ಕೈಯನ್ನು ಗಾಯಗೊಳಿಸಿದೆ.
ಸರಿ ಸುಮಾರು ಏಳು ನಿಮಿಷಗಳ ಕಾಲ ಅಗ್ನಿಶಾಮಕ ದಳದ ಸಿಬ್ಬಂದಿಯ ಕೈಯನ್ನು ಬೆಕ್ಕು ಕಚ್ಚಿ ಹಿಡಿದಿತ್ತು. ಪರಿಣಾಮ ಬೆಕ್ಕು ಕಚ್ಚಿದ ರೋಷಕ್ಕೆ ಬಾವಿಯೊಳಗಡೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಪರದಾಡುವಂತ ಸ್ಥಿತಿ ನಿರ್ಮಾಣವಾಗಿತ್ತು. ಸದ್ಯ ಗಾಯಾಳುಗಳು ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.