ಉಕ್ರೇನ್‌ ನಿಂದ ನವೀನ್ ಪಾರ್ಥೀವ ಶರೀರ ತರಲು ಪ್ರಯತ್ನ: ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ

ಹೊಸದಿಗಂತ ವರದಿ,ಹಾವೇರಿ:

ಉಕ್ರೇನ್ ದೇಶದಲ್ಲಿ ಶೆಲ್ ದಾಳಿಯಿಂದ ಅಮಾಯಕ ನವೀನ ಮೃತಪಟ್ಟಿದ್ದು ನಮ್ಮೆಲ್ಲರಿಗೂ ಆಘಾತ ಉಂಟುಮಾಡಿದೆ. ತಂದೆ-ತಾಯಿಗೆ ತೀವ್ರ ಆಘಾತವಾಗಿದ್ದು, ಮೃತದೇಹ ತರಲು ಸತತ ಪ್ರಯತ್ನ ಮಾಡಲಾಗುತ್ತಿದೆ. ಇದರೊಂದಿಗೆ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ಜೀವ ರಕ್ಷಣೆಯೊಂದಿಗೆ ಅವರನ್ನು ದೇಶಕ್ಕೆ ಕರೆತರಲು ಆದ್ಯತೆ ನೀಡಲಾಗಿದೆ ಎಂದು ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಅವರು ಹೇಳಿದರು.
ರಾಣೇಬೆನ್ನೂರು ತಾಲೂಕು ಚಳಗೇರಿ ಗ್ರಾಮದಲ್ಲಿ ಬುಧವಾರ ನವೀನ ಪಾಲಕರಿಗೆ ಸಾತ್ವಾಂನ ಹೇಳಿ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಅವರು, ವಿದೇಶಾಂಗ ಸಚಿವ ಜಯಶಂಕರ ಅವರೊಂದಿಗೆ ಫೆ.೨೪ ರಿಂದ ಸಂಪರ್ಕದಲ್ಲಿದ್ದೇನೆ ಹಾಗೂ ಪ್ರಧಾನ ಮಂತ್ರಿಗಳು ಈ ಕಾರ್ಯಕ್ಕಾಗಿ ನಾಲ್ಕು ಜನ ಮಂತ್ರಿಗಳನ್ನು ಗಡಿ ರೇಖೆಗೆ ನೇಮಕಮಾಡಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಶೆಲ್ ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಾಕಿ ವಿದ್ಯಾರ್ಥಿಗಳ ಹಾಗೂ ಮೃತದೇಹ ತರಲು ಸಮಸ್ಯೆಯಾಗಿದೆ. ಸ್ವಲ್ಪ ಬಿಡುವು ನೀಡಲು ಉಕ್ರೇನ್ ಹಾಗೂ ರಷ್ಯಾ ದೇಶಗಳಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದರು.
ಉಕ್ರೇನ್‌ದಲ್ಲಿ ಬಹಳ ಕಠಿಣ ಪರಿಸ್ಥಿತಿಯಲ್ಲಿಯೂ ಸಹ ಈವರೆಗೆ ಅಂದಾಜು ೧೨ ಸಾವಿರ ವಿದ್ಯಾರ್ಥಿಗಳನ್ನು ದೇಶಕ್ಕೆ ಕರೆತರಲಾಗಿದೆ. ಇನ್ನೂ ಅಂದಾಜು ಎಂಟು ಸಾವಿರ ವಿದ್ಯಾರ್ಥಿಗಳನ್ನು ಕರೆತರಬೇಕಾಗಿದೆ. ನುರಿತ ಮಿಲಿಟರಿ ಪಡೆಯನ್ನು ಈ ಕಾರ್ಯಕ್ಕೆ ನಿಯೋಜಿಸಲಾಗಿದೆ. ಇಂದು ಒಂಭತ್ತು ವಿಮಾನಗಳು ಆಗಮಿಸುವ ನಿರೀಕ್ಷೆ ಇದೆ. ದೇಶದ ಕೊನೆಯ ಪ್ರಜೆಯನ್ನೂ ಸಹ ಸುರಕ್ಷಿತವಾಗಿ ಕರೆತರುವತನಕ ಪ್ರಧಾನಮಂತ್ರಿಗಳಿಗೆ ಹಾಗೂ ನಮಗೆ ಸಮಾಧಾನವಿಲ್ಲ ಎಂದು ತಿಳಿಸಿದರು.
>> ಉದ್ಯೋಗ ಭರವಸೆ
ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅವರು ಮೃತ ನವೀನ್ ಸಹೋದರ ಹರ್ಷ ಅವರು ಸ್ನಾತಕೋತ್ತರ ಪದವಿಧರರಾಗಿದ್ದು, ಸಂಶೋಧನೆಯಲ್ಲಿ ತೊಡಗಿದ್ದಾರೆ. ವಿದ್ಯಾಭ್ಯಾಸ ಮುಗಿದ ನಂತರ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅಗತ್ಯವಾದ ಶೈಕ್ಷಣಿಕ ಅರ್ಹತೆಯನ್ನು ಗಳಿಸಿದರೆ ಯಾವುದಾದರೂ ಪ್ರತಿಷ್ಠಿತ ಕಾಲೇಜುಗಳಲ್ಲಿ ಕೆಲಸ ಕೊಡಿಸುವ ಭರವಸೆ ನೀಡಿದರು.
ಉಕ್ರೇನ್‌ನಲ್ಲಿ ವಿದ್ಯಾಭ್ಯಾಸಕ್ಕಾಗಿ ಏಜೆಂಟರ್ ಮೂಲಕ ವಿದೇಶಕ್ಕೆ ತೆರಳಿದವರ ಮಾಹಿತಿ ಕಲೆಹಾಕಲಾಗುತ್ತಿದೆ. ಎಲ್ಲ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನ ಮಾಡಲಾಗುತ್ತಿದೆ. ನಂತರ ಅವರ ಶಿಕ್ಷಣ ಮುಂದುವರಿಕೆ ಕುರಿತಂತೆ ಸಕಾರಾತ್ಮಕ ಚಿಂತನೆ ಮಾಡಲಾಗುವುದು. ಇದು ಪಾಲಿಸಿ ವಿಷಯವಾಗಿರುವುದರಿಂದ ಈ ಕುರಿತಂತೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಭರವಸೆ ನೀಡಿದರು.
ಮೃತ ನವೀನ್ ತಂದೆ ಶೇಖರಗೌಡ ಹಾಗೂ ತಾಯಿ ವಿಜಯಮ್ಮ ಅವರು ಕೇಂದ್ರ ಸಚಿವರೊಂದಿಗೆ ಮಾತನಾಡಿ, ಮಗನ ಪಾರ್ಥಿವ ಶರೀರವನ್ನು ತ್ವರಿತವಾಗಿ ತರಿಸಿ ಕುಟುಂಬಕ್ಕೆ ಹಸ್ತಾಂತರಿಸಬೇಕು. ಉಕ್ರೇನ್‌ನಲ್ಲಿ ಉಳಿದಿರುವ ಎಲ್ಲ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ಆದ್ಯತೆ ನೀಡಬೇಕು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಕ್ಷಿಸುವ ಮತ್ತು ಪ್ರೋತ್ಸಾಹಿಸುವ ಕೆಲಸ ಸರ್ಕಾರದಿಂದ ಆಗಬೇಕು. ಪ್ರತಿಭಾವಂತರಿಗೆ ಅವಕಾಶ ಕಲ್ಪಿಸುವ ಕೆಲಸವಾಗಬೇಕು. ಸರ್ಕಾರ ಈ ಕುರಿತಂತೆ ಕ್ರಮವಹಿಸಬೇಕು ಎಂದು ಮನವಿ ಮಾಡಿಕೊಂಡರು.
ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಗುತ್ತೂರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಜಿ.ಪಂ.ಮಾಜಿ ಸದಸ್ಯ ಸಿದ್ಧರಾಜ ಕಲಕೋಟಿ, ಇತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!