May 6, 2026
Wednesday, May 6, 2026
spot_img

ಚಿಪ್ಪು ಹಂದಿಯ ಚಿಪ್ಪು ಮಾರಾಟಕ್ಕೆ ಯತ್ನ: ಕಾರು ಸಹಿತ ಮೂವರ ಬಂಧನ

ಹೊಸ ದಿಗಂತ ವರದಿ,ಮಡಿಕೇರಿ:

ಚಿಪ್ಪು ಹಂದಿಯ ಚಿಪ್ಪುಗಳನ್ನು ಅಕ್ರಮವಾಗಿ ಮಾರಾಟ ಮಾಡಲೆತ್ನಿಸುತ್ತಿದ್ದ ಮೂವರನ್ನು ಸಿಐಡಿ ಪೊಲೀಸ್ ಅರಣ್ಯ ಸಂಚಾರಿದಳದ ಪೊಲೀಸರು ಬಂಧಿಸಿದ್ದು,‌ ಕೃತ್ಯಕ್ಕೆ ಬಳಸಿದ್ದ ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು ದಕ್ಷಿಣ ಜಿಲ್ಲೆಯ ಹೆಚ್ ಆರ್ ಜಗದೀಶ ( 50), ಕನಕಪುರದ ಸಿದ್ದು ನಾಯ್ಕ (38)/ಹಾಗೂ ಬೆಂಗಳೂರು ಬನಶಂಕರಿ‌ಎರಡನೇ ಹಂತದ ಬಾಬು (48) ಬಂಧಿತ ಆರೋಪಿಗಳಾಗಿದ್ದು, ಅವರಿಂದ 1.5ಕಿ.ಗ್ರಾಂ ತೂಕದ ಚಿಪ್ಪು ಹಂದಿಯ ಚಿಪ್ಪುಗಳು, ಅಂದಾಜು 3 ಲಕ್ಷ ಮೌಲ್ಯದ (KA 05 MS 1049) ಬಿಳಿ ಬಣ್ಣದ ಮಾರುತಿ ಸ್ವಿಫ್ಟ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಂಗಳೂರು ಕದ್ರಿ ಉದ್ಯಾನವನದ ಬಳಿಯಲ್ಲಿ ಚಿಪ್ಪು ಹಂದಿಯ ಚಿಪ್ಪುಗಳನ್ನು ಮಾರಾಟಕ್ಕೆ ಯತ್ನಿಸುತಿದ್ದಾರೆ ಎಂಬುದಾಗಿ ಮಂಗಳೂರು ಸಿಐಡಿ ಪೊಲೀಸ್ ಅರಣ್ಯ ಸಂಚಾರಿದಳ ಪೊಲೀಸರಿಗೆ ಮಾಹಿತಿ ದೊರಕಿದೆ.

ಅದರಂತೆ ಮಂಗಳೂರು ಕದ್ರಿ ಉದ್ಯಾನವನದ ಬಳಿ ಹೋಗಿ ಪರಿಶೀಲಿಸಿದಾಗ, ಬಿಳಿ ಬಣ್ಣದ ಮಾರುತಿ ಸ್ವೀಫ್ಟ್ ಕಾರಿನಲ್ಲಿ ಮೂವರು ಚಿಪ್ಪು ಹಂದಿಯ ಚಿಪ್ಪುಗಳನ್ನು ಮಾರಾಟಕ್ಕೆ ಯತ್ನಿಸುತ್ತಿರುವುದು ದೃಢಪಟ್ಟಿದೆ.

ಬೆಂಗಳೂರಿ‌ನ ಸಿ.ಐ.ಡಿ, ಅರಣ್ಯ ಘಟಕದ ಪೊಲೀಸ್ ಮಹಾನಿರೀಕ್ಷಕರ ಹಾಗೂ ಮಡಿಕೇರಿ ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಪವನ್‌ ನೆಲ್ಲೂರು ಅವರ ಮಾರ್ಗದರ್ಶನದಲ್ಲಿ ಮಂಗಳೂರು ಸಿಐಡಿ ಪೊಲೀಸ್‌ ಅರಣ್ಯ ಸಂಚಾರಿ ದಳದ ಪೊಲೀಸ್ ಉಪನಿರೀಕ್ಷಕ ದಿಲೀಪ್ ಜಿ. ಆರ್., ಸಿಬ್ಬಂದಿಗಳಾದ ತಾರನಾಥ ಎಸ್ ಮತ್ತು ಅಬ್ದುಲ್‌ ರವೂಫ್‌ ಅವರುಗಳು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಮಾಲು ಹಾಗೂ ಕಾರು ಸಹಿತ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಅರಣ್ಯ ಕಾಯ್ದೆ ಮತ್ತು ವನ್ಯಜೀವಿಗಳ ಸಂರಕ್ಷಣಾ ಕಾಯ್ದೆಗೆ ಸಂಬಂಧಪಟ್ಟ ಅಕ್ರಮ ಚಟುವಟಿಕೆಗಳು ಕಂಡುಬಂದಲ್ಲಿ ಮಡಿಕೇರಿ ಸಿಐಡಿ ಅರಣ್ಯ ಘಟಕ ಪೊಲೀಸ್ ಅಧೀಕ್ಷಕರ ಕಚೇರಿ ( 9480800220), ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ಮಡಿಕೇರಿ (8277949812), ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ವೀರಾಜಪೇಟೆ ( 8277949817)ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಮಡಿಕೇರಿ ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಪವನ್‌ ನೆಲ್ಲೂರು ಅವರು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !