November 14, 2026
Saturday, November 14, 2026
spot_img

ಗಾಂಜಾ ಮಾರಾಟ ಆರೋಪ: ಹಳಿಯಾಳದಲ್ಲಿ ಯುವಕನ ಬಂಧನ, 6,500ರೂ. ಮೌಲ್ಯದ ಮಾದಕ ವಸ್ತು ವಶ

ಹೊಸದಿಗಂತ ವರದಿ ಹಳಿಯಾಳ:

ಪಟ್ಟಣದ ದೇಶಪಾಂಡೆ ನಗರದ ಇಂಡಸ್ಟ್ರಿಯಲ್ ಪ್ರದೇಶದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ಯುವಕನನ್ನು ಹಳಿಯಾಳ ಪೊಲೀಸರು ಬಂಧಿಸಿದ್ದು, 6,500 ರೂ. ಮೌಲ್ಯದ ಸುಮಾರು 130 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಹಳಿಯಾಳದ ಸಿದ್ದರಾಮೇಶ್ವರ ಗಲ್ಲಿ ಮೂಲದ, ಸದ್ಯ ಪಟ್ಟಣದ ಜಿ+2 ಪ್ರದೇಶದಲ್ಲಿ ವಾಸಿಸುತ್ತಿರುವ ಸುನೀಲ್ ದಶರಥ ಬಂಡಿವಡ್ಡರ (20) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ನವೆಂಬರ್ 13ರಂದು ಸಂಜೆ 4.30ರ ಸುಮಾರಿಗೆ ಇಂಡಸ್ಟ್ರಿಯಲ್ ಪ್ರದೇಶದ ಪ್ರೆಸ್ಟೀಜ್ ಬುಕ್ ಹೌಸ್ ಮುಂದಿನ ರಸ್ತೆಯಲ್ಲಿ ಗಾಂಜಾ ಮಾರಾಟ ನಡೆಯುತ್ತಿರುವ ಕುರಿತು ಖಚಿತ ಮಾಹಿತಿ ಆಧಾರದ ಮೇರೆಗೆ ಸ್ಥಳಕ್ಕಾಗಮಿಸಿ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು, ಗಾಂಜಾ ಜಪ್ತಿ ಮಾಡಿದ್ದಾರೆ. ಪ್ರಕರಣದ ಪ್ರಾಥಮಿಕ ವರದಿಯ ಪ್ರಕಾರ ದ್ವಿಚಕ್ರ ವಾಹನವನ್ನೂ ವಶಪಡಿಸಿಕೊಳ್ಳಲಾಗಿದೆ.

ಈ ಸಂಬಂಧ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 312/2026ರಡಿ ಎನ್‌ಡಿಪಿಎಸ್ ಕಾಯ್ದೆಯ ಕಲಂ 8(ಸಿ), 20(ಬಿ)(ii)(ಎ) ಅನ್ವಯ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.

ಇದನ್ನೂ ಓದಿ:

ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ದಾಂಡೇಲಿ ಪೊಲೀಸ್ ಉಪಾಧೀಕ್ಷಕ ಗಿರೀಶ್ ಬಿ. ಹಾಗೂ ಹಳಿಯಾಳ ವೃತ್ತ ನಿರೀಕ್ಷಕ ಭೀಮಣ್ಣ ಸೂರಿ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು. ಪಿಎಸ್‌ಐ (ಕಾ.ಮತ್ತು ಸು.) ಕಿರಣ್ ಪಾಟೀಲ್ ಹಾಗೂ ಪಿಎಸ್‌ಐ   ಶಿವಕುಮಾರ ಕಾಂಬಳೆ ಅವರ ನೇತೃತ್ವದಲ್ಲಿ ಠಾಣೆಯ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು. ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.

ಮಾದಕ ವಸ್ತುಗಳ ವಿರುದ್ಧ ಮಾಹಿತಿ ನೀಡಿ:

ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಮಾರಾಟ ಅಥವಾ ಬಳಕೆಯ ಕುರಿತು ಮಾಹಿತಿ ದೊರೆತಲ್ಲಿ ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ತಿಳಿಸಬೇಕು. ಮಾದಕ ವಸ್ತುಮುಕ್ತ ಸಮಾಜ ನಿರ್ಮಾಣಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಹಳಿಯಾಳ ಪೊಲೀಸರು ಮನವಿ ಮಾಡಿದ್ದಾರೆ.

Must Read

Skip to toolbar