ಕರ್ನಾಟಕದ ಹಾಲಿನಲ್ಲೂ ಹುಳಿ ಹಿಂಡಲು ಯತ್ನ: ಕೇಂದ್ರದ ವಿರುದ್ಧ ಕುಮಾರಸ್ವಾಮಿ ಅಸಮಾಧಾನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ ಗ್ರಾಮದಲ್ಲಿ ಶುಕ್ರವಾರ ಮೆಗಾಡೇರಿಗೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಚಾಲನೆ ನೀಡಿದ್ದು, ಈ ಕುರಿತಾಗಿ ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಟ್ವಿಟ್ ​ ಮಾಡುವ ಮೂಲಕ ಕಿಡಿಕಾರಿದ್ದಾರೆ.

ನೆಲ, ಜಲ, ನುಡಿಯ ಬಗ್ಗೆ ಕನ್ನಡ ಮತ್ತು ಕರ್ನಾಟಕದ ಮೇಲೆ ಸದಾ ಪ್ರಹಾರ ನಡೆಸುತ್ತಿರುವ ಬಿಜೆಪಿ ಕನ್ನಡಿಗರ ವಿರುದ್ಧ ತನ್ನ ರಕ್ಕಸ ನೀತಿಗಳನ್ನು ಮುಂದುವರಿಸಿದೆ. ಈಗ ಕರ್ನಾಟಕದ ಹಾಲಿನಲ್ಲೂ ಗುಜರಾತಿನ ಹುಳಿ ಹಿಂಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೊರಟಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

ಕನ್ನಡದ ಮೇಲೆ ಹಿಂದಿ ಹೇರಿಕೆ ಮಾಡಲು ಹೊರಟ ವ್ಯಕ್ತಿ,ಈಗ ಕನ್ನಡ ನೆಲದ ಮಣ್ಣಿನ ಮಕ್ಕಳ ಜೀವನಾಡಿ ಕರ್ನಾಟಕ ಹಾಲು ಮಹಾ ಮಂಡಳಿ (KMF- ನಂದಿನಿ) ಯನ್ನು ಗುಜರಾತಿನ ಅಮುಲ್​ನಲ್ಲಿ ವಿಲೀನ ಮಾಡುವ ಹೇಳಿಕೆ ನೀಡಿರುವುದು ಕನ್ನಡಿಗರಿಗೆ ಮಾಡಲು ಹೊರಟಿರುವ ಘೋರ ಅನ್ಯಾಯ. ಕರ್ನಾಟಕ ರಾಜ್ಯವನ್ನು ಗುಜರಾತ್ ಮಾಡುವ ಧೂರ್ತ ಹುನ್ನಾರ ಇದು. ಅಷ್ಟೇ ಅಲ್ಲ, ಗುಜರತ್​ಗೆ ಕರ್ನಾಟಕವೇ ಪ್ರತಿಸ್ಪರ್ಧಿ ಎನ್ನುವ ಕಾರಣಕ್ಕೆ ಅಭಿವೃದ್ಧಿಯಲ್ಲಿ ಕರ್ನಾಟಕವನ್ನು ಮುಗಿಸೇಬೀಡಬೇಕು ಎನ್ನುವ ದುರಾಲೋಚನೆ ಅಮಿತ್ ಶಾ ಅವರಿಗೆ ಸ್ಪಷ್ಟವಾಗಿ ಇದ್ದಂತಿದೆ ಎಂದರು.

ದೇಶದ ಬೇರಾವ ರಾಜ್ಯದ ಮೇಲೆಯೂ ಇಲ್ಲದ ಅಸಹನೆ, ಅಸೂಯೆ, ವೈಷಮ್ಯ ಕರ್ನಾಟಕದ ಮೇಲೇಕೆ ಎಂದು ನಾನು ಕೇಳುತ್ತಿದ್ದೇನೆ. ಕನ್ನಡಿಗರನ್ನು ಶತ್ರುಗಳಂತೆ ನೋಡುತ್ತಿದ್ದಾರೆ. ಕನ್ನಡಿಗರನ್ನು ಗುಜರಾತಿನ ಗುಲಾಮರನ್ನಾಗಿ ಮಾಡಲು ಷಡ್ಯಂತ್ರ ರೂಪಿಸಿದ್ದಾರೆ ಎನ್ನುವುದು ನನ್ನ ಅನುಮಾನ.

ನಂದಿನಿ ಕನ್ನಡಿಗರ ಜೀವನಾಡಿ. ಅದರ ತಂಟೆಗೆ ಬಂದರೆ ಬಿಜೆಪಿ ಭಸ್ಮವಾಗುತ್ತದೆ. ಇಡೀ ದೇಶವನ್ನೇ ಆಳಿದ ಕನ್ನಡಿಗರು ಯಾರೊಬ್ಬರ ಗುಲಾಮರಲ್ಲ. ಕರ್ನಾಟಕವನ್ನು ಆಕ್ರಮಣ ಮಾಡಿಕೊಳ್ಳುವ ಹಾಗೂ ಆರ್ಥಿಕ, ಕೈಗಾರಿಕೆ ಕ್ಷೇತ್ರಗಳಲ್ಲಿ ರಾಜ್ಯವನ್ನು ಹತ್ತಿಕ್ಕುವ ಹುನ್ನಾರ ಯಶಸ್ಸು ಕಾಣದು. ಬಿಜೆಪಿಯ ಬ್ರಹ್ಮರಾಕ್ಷಸ ರೂಪ ಕನ್ನಡಿಗರಿಗೆ ಈಗ ಅರಿವಾಗುತ್ತಿದೆ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೇಶಕ್ಕೇ ಮಾದರಿಯಾಗಿದ್ದ ಕರ್ನಾಟಕವನ್ನು ಉತ್ತರ ಭಾರತದ ಬ್ಯಾಂಕ್​ಗಳಿಗೆ ಅಡಿಯಾಳನ್ನಾಗಿಸಿ, ಹಿಂದಿ ಭಾಷಿಗರ ಉದ್ಧಾರಕ್ಕಾಗಿ ಕನ್ನಡಿಗರ ಅನ್ನ ಕಸಿದುಕೊಂಡ ಬಿಜೆಪಿ ಈಗ, ನಂದಿನಿಯನ್ನು ಹೊಡೆದುಕೊಂಡು ಹೋಗಲು ಹಿಡನ್ ಅಜೆಂಡಾ ರೂಪಿಸಿದಂತಿದೆ. ಕರ್ನಾಟಕ ಎಂದಿಗೂ ಗುಜರಾತಿನ ವಸಾಹತು ಆಗುವುದಿಲ್ಲ. ಅಮುಲ್ ಜತೆ ನಂದಿನಿ ವಿಲೀನ ಸಾಧ್ಯವಿಲ್ಲ. ನಮ್ಮ ರೈತರ ಅನ್ನ ಕಸಿಯುವ ಕೆಲಸವನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಕೆಎಂಎಫ್ ಕನ್ನಡಿಗರ ಜೀವನಾಡಿ ಮಾತ್ರವಲ್ಲ, ಸಮಸ್ತ ಕನ್ನಡಿಗರ ಆಸ್ತಿ ಮತ್ತು ಅಸ್ಮಿತೆ. ಅಮಿತ್ ಶಾ ಅವರು ಇದೆಲ್ಲವನ್ನು ಅರ್ಥ ಮಾಡಿಕೊಂಡರೆ ಒಳ್ಳೆಯದು ಎಂದು ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!