ಈರಣ್ಣ ಕಡಾಡಿ ಮೇಲೆ ಹಲ್ಲೆ ಯತ್ನ: ಬಿಜೆಪಿ ರೈತಮೋರ್ಚಾ ಖಂಡನೆ

ಹೊಸದಿಗಂತ ವರದಿ, ಮಡಿಕೇರಿ:
ರೈತ ಮೋರ್ಚಾದ ರಾಜ್ಯಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ಕಾರಿಗೆ ಮುತ್ತಿಗೆ ಹಾಕಿ ಹಲ್ಲೆಗೆ ಯತ್ನಿಸಿರುವ ಶಾಸಕ ಸತೀಶ್ ಜಾರಕಿಹೊಳಿ ಅವರ ಬೆಂಬಲಿಗರ ಕೃತ್ಯ ಖಂಡನೀಯ ಎಂದು ಕೊಡಗು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಸಮಾಧಾನ ವ್ಯಕ್ತಪಡಿಸಿದೆ.
ಈ ಕುರಿತಿ ಪತ್ರಿಕಾ ಹೇಳಿಕೆ ನೀಡಿರುವ ರೈತ ಮೋರ್ಚಾ ಜಿಲ್ಲಾಧ್ಯಕ್ಷ ನಾಗೇಶ್ ಕುಂದಲ್ಪಾಡಿ ಅವರು ಕಲ್ಲೋಳಿಗೆ ತೆರಳುತ್ತಿದ್ದ ಈರಣ್ಣ ಅವರ ಕಾರಿಗೆ ಮುತ್ತಿಗೆ ಹಾಕಿ ಬಿಜೆಪಿ ನಾಯಕರ ವಿರುದ್ಧ ಘೋಷಣೆಗಳನ್ನು ಕೂಗಿ ಹಲ್ಲೆಗೆ ಮುಂದಾದವರು ಸತೀಶ್ ಜಾರಕಿಹೊಳಿ ಅವರ ಬೆಂಬಲಿತ ಗೂಂಡಾಗಳು ಎಂದು ಆರೋಪಿಸಿದ್ದಾರೆ.
ದಲಿತ ಸಂಘಟನೆಗಳ ಹೆಸರಿನಲ್ಲಿ ಒಬ್ಬ ರಾಜ್ಯಸಭಾ ಸದಸ್ಯರ ಮೇಲೆ ಹಲ್ಲೆ ಯತ್ನ ನಡೆದಿದೆ. ವಿಚಾರವಾದಿ ಎನ್ನುವ ಮುಖವಾಡವನ್ನು ಧರಿಸಿ ಭ್ರಷ್ಟಾಚಾರವನ್ನೇ ಉಸಿರಾಗಿಸಿಕೊಂಡು ರಾಜಕೀಯ ಮಾಡುತ್ತಿರುವ ಸತೀಶ್ ಜಾರಕಿಹೊಳಿ ಅವರಿಗೆ ಈ ಘಟನೆ ಶೋಭೆ ತರುವುದಿಲ್ಲ. ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿ ನಂಬಿಕೆ ಇಲ್ಲದಿರುವ ಇವರು ಮುಗ್ಧ ದಲಿತ ಮುಖಂಡರನ್ನು ಬಳಸಿಕೊಂಡಿದ್ದಾರೆ. ಇದು ದಲಿತರಿಗೆ ಮಾಡಿದ ಅಪಮಾನ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಪಕ್ಷ ತನ್ನ ಗೂಂಡಾ ಸಂಸ್ಕೃತಿಯ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹತ್ತಿಕ್ಕುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇರುತ್ತದೆ. ಪ್ರತಿಭಟನೆಗಳು ಜನಪರವಾಗಿರಬೇಕು, ಆದರೆ ದ್ವೇಷ ಸಾಧನೆಗೋಸ್ಕರ ಪ್ರತಿಭಟನೆಯನ್ನು ಬಳಸಿಕೊಂಡಿರುವುದು ಹೇಯ ಕೃತ್ಯವಾಗಿದೆ. ಯಾವ ಪ್ರಜೆಯೂ ಇದನ್ನು ಸಹಿಸಲು ಸಾಧ್ಯವಿಲ್ಲವೆಂದು ತಿಳಿಸಿರುವ ನಾಗೇಶ್ ಕುಂದಲ್ಪಾಡಿ ಈ ರೀತಿಯ ಮನೋಸ್ಥಿತಿಯನ್ನು ಸರಿಪಡಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯ ರೈತ ಮೋರ್ಚಾದ ವತಿಯಿಂದ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ತೀವ್ರ ರೀತಿಯ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!