ಹೊಸದಿಗಂತ ಡಿಜಿಟಲ್ ಡೆಸ್ಕ್:
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಉಂಟಾದ ‘ಬಿಪರ್‌ಜಾಯ್’ (Biparjoy Cyclone) ಚಂಡಮಾರುತ ಪರಿಣಾಮ ಮುಂದಿನ ನಾಲ್ಕು ದಿನ ಕರ್ನಾಟಕ ಸಹಿತ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಗುಜರಾತ್‌ನ ಕರಾವಳಿಯ ದಕ್ಷಿಣಕ್ಕೆ ಆಗ್ನೇಯ ಅರಬ್ಬಿ ಸಮುದ್ರದ ಮೇಲಿನ ಕಡಿಮೆ ಗಾಳಿಯ ಒತ್ತಡದ ಪ್ರದೇಶ ಸೃಷ್ಟಿಯಾಗಿದೆ. ಇದು ಮುಂದಿನ 24 ಗಂಟೆಯಲ್ಲಿ ಇನ್ನಷ್ಟು ತೀವ್ರಗೊಂಡು ಸ್ಪಷ್ಟ ಚಂಡಮಾರುತವಾಗಿ ಬದಲಾಗಲಿದೆ. ಈ ಸೈಕ್ಲೋನ್ ಗಾಳಿಯ ವೇಗವು ಆರಂಭಿಕ ಹಂತದಲ್ಲಿ ಪ್ರತಿ ಗಂಟೆಗೆ 45-55 ಕಿಲೋ ಮೀಟರ್ ಇರಲಿದ್ದು, ಗರಿಷ್ಠ 145-155 ಕಿಲೋ ಮೀಟರ್‌ವರೆಗೆ ಬೀಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಐಎಂಡಿ ಪ್ರಕಾರ, ಈ ಕಡಿಮೆ ಒತ್ತಡದ ಪ್ರದೇಶ ಅರಬ್ಬಿ ಸಮುದ್ರದಲ್ಲಿ ಗೋವಾದಿಂದ ಪಶ್ಚಿಮ-ನೈಋತ್ಯಕ್ಕೆ 920 ಕಿಮೀ ದೂರದಲ್ಲಿದೆ. ಮುಂಬೈನಿಂದ ದಕ್ಷಿಣ-ನೈಋತ್ಯಕ್ಕೆ 1,120 ಕಿ.ಮೀ, ಗುಜರಾತ್‌ನ ಪೋರಬಂದರ್‌ನಿಂದ ದಕ್ಷಿಣಕ್ಕೆ 1,160 ಕಿ.ಮೀ, ಪಾಕಿಸ್ತಾನದ ಕರಾಚಿಯಿಂದ 1,520 ಕಿಮೀ ದಕ್ಷಿಣ ದಿಕ್ಕಿನಲ್ಲಿದೆ.
ಈ ಬಿಪರ್‌ಜಾಯ್ ಚಂಡಮಾರುತವು ಆಗ್ನೇಯ ಅರಬ್ಬಿ ಸಮುದ್ರದಿಂದ ಪೂರ್ವ-ಮಧ್ಯ ಅರಬ್ಬಿ ಸಮುದ್ರತ್ತ ಚಲಿಸುವ ಸಾಧ್ಯತೆ ಇದೆ. ಇದರ ಪ್ರಭಾವ ಜೂನ್ 12ರವರೆಗೆ ಇರುವ ನಿರೀಕ್ಷೆ ಇದೆ. ಈ ಸಂಬಂಧ ಕರಾವಳಿ ಭಾಗದ ಮೀನುಗಾರರಿಗೂ ಎಚ್ಚರಿಕೆ ನೀಡಲಾಗಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.
ಮಹಾರಾಷ್ಟ್ರದ ಮುಂಬೈ, ಪುಣೆ ಸೇರಿದಂತೆ ರಾಜ್ಯದ ವಿವಿಧೆಡೆ, ಗುಜರಾತ್, ಕರ್ನಾಟಕದ ವಿವಿಧೆಡೆ ಜೂನ್ 8 ರಿಂದ ಜೂನ್ 10ರವರೆಗೆ ಮೂರು ದಿನ ಜೋರು ಮಳೆಯ ಸುರಿಯಲಿದೆ. ಪ್ರಸಕ್ತ ಮುಂಗಾರು ಆರಂಭದಲ್ಲಿ ಮುಂಬೈ ಹೆಚ್ಚು ಮಳೆಯಾಗಲಿದ್ದು, ಅದನ್ನು ಸಮರ್ಥವಾಗಿ ಎದುರಿಸಲು ನಗರವು ಎಲ್ಲ ರೀತಿಯಲ್ಲೂ ಸಜ್ಜಾಗಿದೆ ಎಂದು ಮುಂಬೈ ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (AMMRDA) ಆಯುಕ್ತ ಎಸ್.ವಿ.ಆರ್. ಶ್ರೀನಿವಾಸ್ ಶುಕ್ರವಾರ ತಿಳಿಸಿದ್ದಾರೆ.
ದಕ್ಷಿಣ ಕನ್ನಡ, ಉಡುಪಿಯಲ್ಲಿ ಅಲರ್ಟ್:
ಈ ಕುರಿತಂತೆ ಉಡುಪಿ, ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದ ಕರಾವಳಿ ಭಾಗದಲ್ಲಿ ನಾಲ್ಕು ದಿನ ಚಂಡಮಾರುತ ಇರಲಿದೆ. ಇದರಿಂದ ಭಾರೀ ಮಳೆಯಾಗುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದಾಗಿ ತಿಳಿಸಿದೆ.
ಬಿರುಗಾಳಿ ಸಹಿತ ಭಾರೀ ಚಂಡಮಾರುತದ ಪರಿಣಾಮ, ಮೀನುಗಾರರು ಸಮುದ್ರಕ್ಕೆ ಇಳಿಯುವುದು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಪ್ರವಾಸಿಗರು, ಸ್ಥಳೀಯರು ಸಮುದ್ರ, ನದಿ ತೀರಕ್ಕೆ ತೆರಳದಂತೆ ಸೂಚಿಸಿದೆ.ಇನ್ನೂ ತಗ್ಗು ಪ್ರದೇಶದ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆಯೂ ಉಡುಪಿ ಜಿಲ್ಲಾಡಳಿತವು ಪ್ರಕರಣಯಲ್ಲಿ ಮುನ್ಸೂಚನೆ ನೀಡಿದೆ.