ಹೊಸದಿಗಂತ ವಿಜಯನಗರ:
ದಸರಾ ಹಬ್ಬದ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು- ಬಳ್ಳಾರಿ, ಹೊಸಪೇಟೆ, ಕೊಪ್ಪಳಕ್ಕೆ ವಿಶೇಷ ರೈಲು ಕಲ್ಪಿಸುವಂತೆ ಕೋರಿ ಸಂಸದ ಈ.ತುಕಾರಾಂ ಅವರು ಬರೆದ ಪತ್ರಕ್ಕೆ ೨೪ ಗಂಟೆಗಳಲ್ಲಿ ನೈಋತ್ಯ ರೈಲ್ವೇ ವಲಯ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದಾರೆ.
ಈ ಕುರಿತು ಹಲವು ಬಾರಿ ರೈಲ್ವೇ ಅಧಿಕಾರಿಗಳ ಗಮನ ಸೆಳೆದಿದ್ದ ಸಂಸದ ತುಕಾರಾಂ ಅವರು, ಸೆ.೨೪ ರಂದು ನೈಋತ್ಯ ರೈಲ್ವೇ ವಲಯದ ಪ್ರಧಾನ ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದರು. ದಸರಾ ಮತ್ತು ದೀಪಾವಳಿ ಹಬ್ಬದ ನಿಮಿತ್ತ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ಅಥವಾ ಮೈಸೂರಿನಿಂದ ಬಳ್ಳಾರಿ, ಹೊಸಪೇಟೆ, ಕೊಪ್ಪಳಕ್ಕೆ ವಿಶೇಷ ರೈಲು ಕಲ್ಪಿಸುವಂತೆ ಕೋರಿದ್ದರು. ಅದಕ್ಕೆ ಮರುದಿನವೇ ಇಲಾಖೆ ಅಧಿಕಾರಿಗಳು ಒಪ್ಪಿಗೆ ನೀಡಿದ್ದಾರೆ.
ರೈಲು ಸಂಖ್ಯೆ 06215/ 06216 ಸೆ.26 ಹಾಗೂ ಸೆ.28 ರಂದು ರಾತ್ರಿ ೭ ಗಂಟೆಗೆ ಬೆಂಗಳೂರಿನ ವಿಶ್ವೇಶ್ವರಯ್ಯ(ಭೈಯಪ್ಪನಹಳ್ಳಿ) ನಿಲ್ದಾಣದಿಂದ ಹೊರಟು ತುಮಕೂರು, ಅರಸಿಕೆರೆ, ರಾಯದುರ್ಗ, ಬಳ್ಳಾರಿ ಕಂಟೋನ್‌ಮೆಂಟ್ ಮಾರ್ಗವಾಗಿ ಮರುದಿನ ಬೆಳಗ್ಗೆ ೪.೧೫ಕ್ಕೆ ಹೊಸಪೇಟೆಗೆ ತಲುಪಲಿದೆ. ಅದೇ ರೀತಿ 27.09.2025 ಹಾಗೂ 29.09.2025 ರಂದು ಹೊಸಪೇಟೆಯಿಂದ ರಾತ್ರಿ 8.45ಕ್ಕೆ ನಿರ್ಗಮಿಸಿ ಅದೇ ಮಾರ್ಗವಾಗಿ ಮರುದಿನ ಬೆಳಿಗ್ಗೆ ೮.೧೦ಕ್ಕೆ ವಿಶ್ವೇಶ್ವರಯ್ಯ ರೈಲ್ವೇ ನಿಲ್ದಾಣಕ್ಕೆ ಸೇರಲಿದೆ. ೪-ಎಸಿ ಕೋಚ್, ೧೦-ಸ್ಲೀಪರ್ ಕ್ಲಾಸ್, ೫-ಸಾಮಾನ್ಯ ದರ್ಜೆಯ ಕೋಚ್‌ಗಳನ್ನು ಈ ರೈಲು ಹೊಂದಿದೆ.
ಸAಸದ ಇ.ತುಕಾರಾಂ ಹಾಗೂ ನೈರುತ್ಯ ರೈಲ್ವೇ ವಲಯ ಬಳಕೆದಾರರ ಸಲಹಾ ಸಮಿತಿ ಸದಸ್ಯ ಬಾಬುಲಾಲ್ ಜೈನ್ ಅವರ ಪ್ರಯತ್ನದಿಂದ ಹಬ್ಬದ ನಿಮಿತ್ತ ವಿಶೇಷ ರೈಲು ಮಂಜೂರಾಗಿದೆ ಎಂದು ವಿಜಯನಗರ ರೈಲ್ವೇ ಬಳಕೆದಾರರ ಸಂಘದ ಅಧ್ಯಕ್ಷ ವೈ.ಯಮುನೇಶ್, ಕಾರ್ಯದರ್ಶಿ ಮಹೇಶ್ ಕುಡುತಿನಿ ಸಂತಸ ವ್ಯಕ್ತಪಡಿಸಿದ್ದಾರೆ.