Friday, December 8, 2023

Latest Posts

ಅತ್ತಿಬೆಲೆ ಅಗ್ನಿ ದುರಂತ: ಸಿಐಡಿ ಹೆಗಲಿಗೆ ತನಿಖೆಯ ಹೊರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆನೇಕಲ್ ನ ಅತ್ತಿಬೆಲೆ ಅಗ್ನಿದುರಂತದ ಘಟನೆಯ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಮೃತರ ಕುಟುಂಬಕ್ಕೆ ಈಗಾಗಲೇ ಘೋಷಿಸಿರುವಂತೆ ಸರ್ಕಾರದ ವತಿಯಿಂದ 5 ಲಕ್ಷ ರೂ.ಗಳನ್ನು ನೀಡಲಾಗುವುದು.ಹಾಗೂ ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಸರ್ಕಾರದಿಂದ ಭರಿಸಲಾಗುವುದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಇಂದು ಅತ್ತಿಬೆಲೆಯಲ್ಲಿ ನಡೆದ ಅಗ್ನಿದುರಂತದ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.ಅಕ್ಟೋಬರ್ 08 ರಂದು ಸುಮಾರು ಮಧ್ಯಾಹ್ನ 3.15 ರಿಂದ 3.30 ಗಂಟೆ ಸಮಯದೊಳಗೆ ಬೆಂಕಿ ಅನಾಹುತ ನಡೆದಿದೆ. ಇದು ಅತ್ಯಂತ ದುರದೃಷ್ಟಕರ ಘಟನೆ. ರಾಮುಸ್ವಾಮಿರೆಡ್ಡಿ ಎಂಬುವರು ಪರವಾನಗಿ ಪಡೆದು ಪಟಾಕಿ ಮಾರಾಟದ ವ್ಯವಹಾರ ಮಾಡುತ್ತಿದ್ದರು.ಅಧಿಕಾರಿಗಳು ಇಲ್ಲಿ ಪರಿಶೀಲಿಸಿದ ಮೇಲೆ, ಸ್ಪೋಟಕಗಳ ಮಾರಾಟ ಮಾಡುವ ಗೋದಾಮಿನಲ್ಲಿ ಸುರಕ್ಷಾ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ ಎಂದು ಕಂಡುಬಂದಿದೆ ಎಂದರು.

ಪರವಾನಾಗಿಯನ್ನು ಸೆಪ್ಟೆಂಬರ್ ತಿಂಗಳಲ್ಲಿ ದಿ.13.9.2023 ರಂದು ನವೀಕರಿಸಲಾಗಿದೆ. ದಿ:31.10.2028 ರವರೆಗೆ ಜಾರಿಯಲ್ಲಿದೆ. ಮತ್ತೊಂದು ಪರವಾನಗಿ 18.1.2021 ರಂದು 28.1.2026 ರವರೆಗೆ ಜಾರಿಯಲ್ಲಿರಲಿದೆ. ಜಯಮ್ಮ, ಕೋಂ ದಿ. ಸಿದ್ದಾರೆಡ್ಡಿ, ಅನಿಲ್ ರೆಡ್ಡಿ ಬಿನ್ ಸಿದ್ದಾರೆಡ್ಡಿ ಎಂಬುವವರು ಈ ಸ್ಥಳದ ಮಾಲೀಕರು ಎಂದು ವಿವರಿಸಿದರು.

ಗೋದಾಮಿನ ಸ್ಥಳ ಬಹಳ ಕಿರಿದಾಗಿದ್ದು, ಇದರಲ್ಲಿ 14 ಜನರು ಮೃತಪಟ್ಟಿದ್ದಾರೆ. ಎಲ್ಲರೂ ತಮಿಳುನಾಡಿನ ಕೃಷ್ಣಗಿರಿ, ಧರ್ಮಪುರಿಯವರು. ಅವರಲ್ಲಿ ಬಹುತೇಕರು ವಿದ್ಯಾರ್ಥಿಗಳು. ರಜಾ ಸಮಯದಲ್ಲಿ ಓದಿಗಾಗಿ ಹಣ ಸಂಪಾದನೆಗಾಗಿ ಬಂದವರು. ಒಬ್ಬ ಮ್ಯಾನೇಜರ್ ನ್ನು ಹೊರತುಪಡಿಸಿ ಯಾರೂ ಖಾಯಂ ನೌಕರರಿಲ್ಲ. ಸ್ಫೋಟಕಗಳಿಗೆ ಅಗತ್ಯವಾದ ಯಾವುದೇ ಸುರಕ್ಷಾ ಕ್ರಮಗಳನ್ನು ಕೈಗೊಂಡಿಲ್ಲ. ಒಟ್ಟಾರೆ ಮೇಲ್ನೋಟಕ್ಕೆ ಪರವಾನಗಿ ಹೊಂದಿದವರ ನಿರ್ಲಕ್ಷ್ಯ ಎದ್ದುಕಾಣುತ್ತಿದೆ ಎಂದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!