ಕಲಬುರಗಿಯಲ್ಲಿ ಗಣವೇಷಧಾರಿ ಸ್ವಯಂಸೇವಕರಿಂದ ಆಕರ್ಷಕ ಪಥ ಸಂಚಲನ

ಹೊಸದಿಗಂತ ವರದಿ, ಕಲಬುರಗಿ:

ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂಗಳದಲ್ಲಿ ( ಸಂಘದ ಶಾಖೆ )ಯಲ್ಲಿ ಸಂಘಟನೆಯ ಜೊತೆ ಜೊತೆಗೆ ವ್ಯಕ್ತಿ ನಿರ್ಮಾಣದ ಕಾರ್ಯವನ್ನು ಕಳೆದ ೯೯ ವರ್ಷಗಳಿಂದ ಸಂಘವು ಮಾಡಿಕೊಂಡು ಬರುತ್ತಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಲಬುರಗಿ ವಿಭಾಗದ ವಿಭಾಗ ಸಂಪರ್ಕ ಪ್ರಮುಖ ಸಾಗರ್ ಸತಾಳಕರ್ ತಿಳಿಸಿದರು.

ನಗರದ ಶಹಾಬಜಾರ್ ಬಡಾವಣೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಕಲಬುರಗಿ ನಗರದ ಲಾಲ್ ಹನುಮಾನ್ ಉಪ ನಗರದ ಪಥ ಸಂಚಲನ ಕಾರ್ಯಕ್ರಮದ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಆಗಮಿಸಿ ಮಾತನಾಡಿದ ಅವರು, ಸಂಘದ ದಿನನಿತ್ಯದ ಒಂದು ಗಂಟೆ ಶಾಖೆಯಲ್ಲಿ ವ್ಯಾಯಾಮ, ಅಮೃತ ವಚನ, ಶ್ಲೋಕ, ಸೂರ್ಯ ನಮಸ್ಕಾರ, ವಿವಿಧ ಆಟಗಳು ಆಡಿಸುವ ಮೂಲಕ ಎಲ್ಲರನ್ನೂ ಸಂಘಟಿತರನ್ನಾಗಿಸುವ ಕಾರ್ಯದ ಜೊತೆ ಜೊತೆಗೆ ವ್ಯಕ್ತಿ ನಿರ್ಮಾಣ,ರಾಷ್ಟ್ರ ನಿರ್ಮಾಣದ ಕೆಲಸ ನಡೆಯುತ್ತಿದೆ ಎಂದು ಹೇಳಿದರು.

ಸಂಘದ ಮೊದಲನೇ ಸರಸಂಘಚಾಲಕರಾದ ಪರಮ ಪೂಜನೀಯ ಡಾ.ಕೇಶವ್ ಬಲಿರಾಮ್ ಹೆಡಗೆವಾರ್ ಅವರು, ಕೇವಲ ಬೆರಳೆಣಿಕೆಯಷ್ಟು ಸ್ವಯಂಸೇವಕರಿಂದ ಆರಂಭ ಮಾಡಿದ ಸಂಘವು, ಇಂದು ವಿಶ್ವದ ಅತೀ ದೊಡ್ಡ ಸಂಘಟನೆಯಾಗಿ ಹೊರಹೊಮ್ಮಿದೆ. ಭಾರತ ಸೇರಿದಂತೆ ೫೩ ರಾಷ್ಟ್ರಗಳಲ್ಲಿ ಸಂಘದ ವಿವಿಧ ಚಟುವಟಿಕೆಗಳು ನಡೆಯುತ್ತಿವೆ ಎಂದು ಹೇಳಿದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಯದೇವ ಆಸ್ಪತ್ರೆಯ ಕಾರ್ಡಿಯಾಲಜಿಯ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಡಾ.ಅಕ್ಷಯ್ ಚಿಂಚೋಳಿ ಮಾತನಾಡಿ, ದೇಶ, ಧರ್ಮದ ವಿಷಯ ಬಂದಾಗ ಮೊಟ್ಟ ಮೊದಲು ಧಾವಿಸುವುದು ರಾಷ್ಟ್ರೀಯ ಸ್ವಯಂಸೇವಕ ಸಂಘ. ಇಂತಹ ಸಂಘಟನೆಯ ಕಾರ್ಯಕ್ರಮವೊಂದರಲ್ಲಿ ನನಗೆ ಭಾಗಿಯಾಗಲು ಅವಕಾಶ ದೊರೆತಿದ್ದು ನನ್ನ ಸೌಭಾಗ್ಯ ಎಂದರು.

ಇದಕ್ಕೂ ಮುನ್ನ ನಗರದ ಶಹಾಬಾಜಾರ್ ಲಾಲ್ ಹನುಮಾನ ದೇವಸ್ಥಾನದಿಂದ ಪ್ರಾರಂಭವಾದ ಪಥ ಸಂಚಲನ, ಶಹಾಬಜಾರ್ ಮರಗಮ್ಮಾ ದೇವಸ್ಥಾನ, ಖಟಗರ್ ಪುರ್, ನಾಕಾ, ಶೆಟ್ಟಿ ಟಾಕೀಸ್, ಶಹಾಬಜಾರ್ ಆರಾಧನಾ ಕಾಲೇಜು ರೋಡ್, ಗಂಧಿಗುಡಿ ಲೇಔಟ್,ಮರಳಿ ಶೆಟ್ಟಿ ಟಾಕೀಸ್ ಮುಂಭಾಗದಿಂದ ಕಾರ್ಯಕ್ರಮದ ಸ್ಥಳಕ್ಕೆ ತಲುಪಿತು. ನೂರಾರು ಗಣವೇಷಧಾರಿ ಸ್ವಯಂಸೇವಕರು ಪಥ ಸಂಚಲನದಲ್ಲಿ ಭಾಗಿಯಾಗಿದ್ದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಲಬುರಗಿ ವಿಭಾಗದ ವಿಭಾಗ ಪ್ರಚಾರಕ ವಿಜಯ್ ಮಹಾಂತೇಶ ಸೇರಿದಂತೆ ಹಲವರು ಉಪಸ್ಥಿತರಿದ್ದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!