ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲು ಕಂಡಿದೆ.
ಈ ಹೀನಾಯ ಸೋಲಿನೊಂದಿಗೆ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ (WTC) ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ.
ಇದರಿಂದ WTC ಫೈನಲ್ ಪ್ರವೇಶಿಸುವುದು ಭಾರತ ತಂಡಕ್ಕೆ ಸವಾಲಾಗಿದೆ.
ಇನ್ನೂ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಮತ್ತೊಮ್ಮೆ ಪ್ರಾಬಲ್ಯ ಮೆರೆದಿರುವ ಆಸ್ಟ್ರೇಲಿಯಾ ಐತಿಹಾಸಿಕ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ದಕ್ಷಿಣ ಆಫ್ರಿಕಾ 2ನೇ ಸ್ಥಾನ ಪಡೆದುಕೊಂಡಿದೆ.
ಅಡಿಲೇಡ್‌ನ ಮೈದಾನದಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ, ಭಾರತದ ವಿರುದ್ಧ 10 ವಿಕೆಟ್‌ಗಳ ಗೆಲುವು ಕಂಡಿದೆ.
ದ್ವಿತೀಯ ಟೆಸ್ಟ್‌ನಲ್ಲಿ ಟಾಸ್ ಗೆದ್ದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 180 ರನ್ ಗಳಿಸಿತ್ತು. ಆಸ್ಟ್ರೇಲಿಯಾ 337 ರನ್‌ಗಳಿಸುವುದರೊಂದಿಗೆ 157 ರನ್‌ಗಳ ಮುನ್ನಡೆ ಕಾಯ್ದುಕೊಂಡಿತ್ತು. ಆದ್ರೆ 2ನೇ ಇನ್ನಿಂಗ್ಸ್‌ನಲ್ಲಿ ಭಾರತ 175 ರನ್‌ಗಳಿಗೆ ಆಲೌಟ್ ಆಗುವುದರೊಂದಿಗೆ ಕೇವಲ 19 ರನ್‌ಗಳ ಗುರಿ ನೀಡಿತು.
ಅಂತಿಮವಾಗಿ ಆಸ್ಟ್ರೇಲಿಯಾ 3.2 ಓವರ್‌ಗಳಲ್ಲಿ ಗುರಿ ಬೆನ್ನತ್ತಿ ಸುಲಭ ಜಯ ದಾಖಲಿಸಿತು. ಇದರೊಂದಿಗೆ ಸರಣಿಯು 1-1 ಸಮವಾಗಿದೆ. ಈ ಮೂಲಕ WTC ಅಂಕಪಟ್ಟಿಯಲ್ಲಿ ಆಸೀಸ್ ಮೊದಲ ಸ್ಥಾನಕ್ಕೇರಿದೆ.