ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಳು ವರುಷಗಳ ಹಿಂದೆ ಬೆಳ್ಳಿತೆರೆಗೆ ಬಂದು ಜಗತ್ತಿನಾದ್ಯಂತ ಇತಿಹಾಸ ಸೃಷ್ಟಿಸಿದ್ದ ಮಾರ್ವೆಲ್ ಸಿನಿಮಾ ‘ಅವೇಂಜರ್ಸ್: ಎಂಡ್‌ಗೇಮ್’ ಈಗ ಮತ್ತೆ ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟು ಹೊಸ ಕ್ರಾಂತಿ ಸೃಷ್ಟಿಸಿದೆ. ಕೊರೊನಾ ನಂತರ ಮಾರ್ವೆಲ್ ಸಂಸ್ಥೆಯ ಕೆಲವು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಸಾಧಾರಣ ಪ್ರದರ್ಶನ ಕಂಡಿದ್ದವು. ಆದರೆ, ಈ ವರುಷದ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿರುವ ‘ಅವೇಂಜರ್ಸ್: ಡೂಮ್ಸ್‌ಡೇ’ ಸಿನಿಮಾಗೆ ಭರ್ಜರಿ ಮುನ್ನುಡಿ ಬರೆಯಲು ‘ಅವೇಂಜರ್ಸ್: ಎಂಡ್‌ಗೇಮ್ ಎನ್‌ಕೋರ್’ ಹೆಸರಿನಲ್ಲಿ ಈ ಸಿನಿಮಾವನ್ನು ಮತ್ತೆ ರಿಲೀಸ್ ಮಾಡಲಾಗಿದೆ.
ಈ ಬಾರಿ ಹಳೆಯ ಚಿತ್ರವಷ್ಟೇ ಅಲ್ಲದೆ, ಪ್ರೇಕ್ಷಕರಿಗೆ ಹೊಸ ಅನುಭವ ನೀಡಲು ಕೆಲ ಹೆಚ್ಚುವರಿ ದೃಶ್ಯಗಳು ಮತ್ತು ಹೊಸ ಕ್ಲೈಮ್ಯಾಕ್ಸ್ ಜೊತೆಗೆ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ.
ರೀ-ರಿಲೀಸ್‌ನಲ್ಲೂ ರೆಕಾರ್ಡ್
ಕಳೆದ ವಾರಾಂತ್ಯದಲ್ಲಿ ಈ ಚಿತ್ರ ಉತ್ತರ ಅಮೆರಿಕದಲ್ಲಿ ಬರೋಬ್ಬರಿ 26 ಮಿಲಿಯನ್ ಹಾಗೂ ಜಗತ್ತಿನ ಇತರೆ ದೇಶಗಳಲ್ಲಿ 60 ಮಿಲಿಯನ್ ಗಳಿಸುವ ಮೂಲಕ, ಒಟ್ಟು 700+ ಕೋಟಿ ರೂಪಾಯಿ ಗಳಿಸಿ ವಿಶ್ವದಲ್ಲೇ ಅತಿ ಹೆಚ್ಚು ಗಳಿಕೆ ಕಂಡ ರೀ-ರಿಲೀಸ್ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸಾಮಾನ್ಯವಾಗಿ ಚಿತ್ರರಂಗದಲ್ಲಿ ಹೊಸ ಸಿನಿಮಾಗಳಿಲ್ಲದಿದ್ದಾಗ ಖಾಲಿ ಜಾಗವನ್ನು ತುಂಬಲು ಹಳೆಯ ಸಿನಿಮಾಗಳನ್ನು ಮರು-ಬಿಡುಗಡೆ ಮಾಡಲಾಗುತ್ತದೆ. ಆದರೆ ಈ ವಾರ ಬ್ರಾಡ್ ಪಿಟ್ ನಟನೆಯ ‘ಹಾರ್ಟ್ ಆಫ್ ದಿ ಬೀಸ್ಟ್’ ಮತ್ತು ರಾಬರ್ಟ್ ಪ್ಯಾರಿಸನ್ ನಟನೆಯ ‘ಪ್ರೈಮ್‌ಟೈಮ್’ ನಂತಹ ಹೊಸ ಸಿನಿಮಾಗಳು ಬಿಡುಗಡೆಯಾಗಿದ್ದರೂ, ‘ಎಂಡ್‌ಗೇಮ್’ ಅವುಗಳನ್ನೆಲ್ಲಾ ಸುಲಭವಾಗಿ ಹಿಂದಿಕ್ಕಿ ನಂಬರ್ 1 ಸ್ಥಾನಕ್ಕೇರಿದೆ.
ಬ್ರಾಡ್ ಪಿಟ್ ಅವರ ‘ಹಾರ್ಟ್ ಆಫ್ ದಿ ಬೀಸ್ಟ್’ 50 ಮಿಲಿಯನ್ ಗಳಿಸಿ ಎರಡನೇ ಸ್ಥಾನ ಪಡೆದರೆ, ಕೇವಲ 15 ಮಿಲಿಯನ್ ಬಜೆಟ್‌ನಲ್ಲಿ ತಯಾರಾಗಿದ್ದ ರಾಬರ್ಟ್ ಪ್ಯಾರಿಸನ್ ಅವರ ಕ್ರೈಮ್ ಡ್ರಾಮಾ ‘ಪ್ರೈಮ್‌ಟೈಮ್’ 30 ಮಿಲಿಯನ್ ಗಳಿಸಿ ಸಣ್ಣ ಬಜೆಟ್‌ನಲ್ಲೂ ಉತ್ತಮ ಯಶಸ್ಸು ಕಂಡಿದೆ.
ಒಟ್ಟಿನಲ್ಲಿ, ಡಿಸೆಂಬರ್‌ನಲ್ಲಿ ಬರಲಿರುವ ‘ಅವೇಂಜರ್ಸ್: ಡೂಮ್ಸ್‌ಡೇ’ ಚಿತ್ರಕ್ಕೆ ಈ ‘ಎಂಡ್‌ಗೇಮ್ ಎನ್‌ಕೋರ್’ ನೀಡಿದ ಪವರ್‌ಫುಲ್ ಓಪನಿಂಗ್, ಮಾರ್ವೆಲ್ ಸಾಮ್ರಾಜ್ಯಕ್ಕೆ ಮತ್ತೆ ಹೊಸ ಚೈತನ್ಯ ತಂದಿದೆ.



