October 30, 2026
Friday, October 30, 2026
spot_img

ವಿಶ್ವ ಕುಸ್ತಿ ಅಖಾಡದಲ್ಲಿ ಭಾರತದ ಮಹಿಳಾ ಶಕ್ತಿ ಪ್ರದರ್ಶನ: ಮನೀಷಾಗೆ ಚಿನ್ನ, ನೀಲಂ–ಕಾಜಲ್‌ಗೆ ಬೆಳ್ಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಆರಂಭದಲ್ಲಿ ಎದುರಾಳಿಯ ಪ್ರಾಬಲ್ಯಕ್ಕೆ ಸಿಲುಕಿದರೂ ಕೊನೆಯ ಕ್ಷಣದವರೆಗೂ ಹೋರಾಟ ಬಿಡದ ಭಾರತದ ಕುಸ್ತಿಪಟು ಮನೀಷಾ ಭನ್ವಾಲಾ ವಿಶ್ವಮಟ್ಟದಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಕಜಕಿಸ್ತಾನದ ಅಸ್ತಾನಾದಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನ ಮಹಿಳೆಯರ 59 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಅವರು, ಹಿರಿಯರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸೋಲಿನ ಅಂಚಿನಿಂದ ಗೆಲುವಿನ ಶಿಖರಕ್ಕೆ

ಚಿನ್ನದ ಪದಕಕ್ಕಾಗಿ ನಡೆದ ಅಂತಿಮ ಪಂದ್ಯದಲ್ಲಿ ಪ್ಯಾನ್ ಅಮೆರಿಕನ್ ಚಾಂಪಿಯನ್ ಅಬಿಗೇಲ್ ನೆಟ್ಟೆ ವಿರುದ್ಧ ಮನೀಷಾ ಆರಂಭದಲ್ಲಿ 0-6 ಅಂಕಗಳಿಂದ ಹಿನ್ನಡೆ ಅನುಭವಿಸಿದ್ದರು. ಆದರೆ ಒತ್ತಡಕ್ಕೆ ಮಣಿಯದೆ ತಂತ್ರ ಮತ್ತು ಆತ್ಮವಿಶ್ವಾಸದಿಂದ ಎದುರಾಳಿಗೆ ತಿರುಗೇಟು ನೀಡಿದರು. ನಿರಂತರ ದಾಳಿಯ ಮೂಲಕ ಅಂಕಗಳನ್ನು ಗಳಿಸಿದ ಅವರು ಪಂದ್ಯವನ್ನು 8-6ರಿಂದ ತಮ್ಮದಾಗಿಸಿಕೊಂಡರು. ಈ ಮೂಲಕ ಅಸಾಧಾರಣ ಪುನರಾಗಮನದೊಂದಿಗೆ ಚಿನ್ನದ ಪದಕವನ್ನು ಮುತ್ತಿಕ್ಕಿದರು.

16 ವರ್ಷಗಳ ಬಳಿಕ ಭಾರತಕ್ಕೆ ವಿಶ್ವ ಚಿನ್ನ

ಹಿರಿಯರ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಚಿನ್ನದ ಪದಕ ಗೆದ್ದು 16 ವರ್ಷಗಳಾಗಿದ್ದವು. 2010ರಲ್ಲಿ ಸುಶೀಲ್ ಕುಮಾರ್ ಚಿನ್ನ ಗೆದ್ದ ಬಳಿಕ ಭಾರತಕ್ಕೆ ಈ ವಿಭಾಗದಲ್ಲಿ ಮತ್ತೊಂದು ವಿಶ್ವ ಪ್ರಶಸ್ತಿ ಲಭಿಸಿರಲಿಲ್ಲ. ಇದೀಗ ಮನೀಷಾ ಅವರ ಸಾಧನೆ ಆ ಕಾಯುವಿಕೆಗೆ ತೆರೆ ಎಳೆದಿದೆ. ವಿಶೇಷವಾಗಿ ಮಹಿಳಾ ಕುಸ್ತಿಯಲ್ಲಿ ಇದು ಐತಿಹಾಸಿಕ ಮೈಲಿಗಲ್ಲಾಗಿದೆ.

ಇದನ್ನೂ ಓದಿ:

ನೀಲಂ, ಕಾಜಲ್ ಸಾಧನೆಗೂ ಮೆರುಗು

ಇದೇ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ನೀಲಂ ಸಿರೋಹಿ (50 ಕೆ.ಜಿ.) ಮತ್ತು ಕಾಜಲ್ ಧೋಕಾಚಕ್ (76 ಕೆ.ಜಿ.) ಫೈನಲ್ ಪ್ರವೇಶಿಸಿ ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ. ಒಂದೇ ಆವೃತ್ತಿಯಲ್ಲಿ ಇಬ್ಬರು ಭಾರತೀಯ ಮಹಿಳೆಯರು ಫೈನಲ್ ತಲುಪಿರುವುದು ಇದೇ ಮೊದಲು. 2021ರಲ್ಲಿ ಅಂಶು ಮಲಿಕ್ ಗಳಿಸಿದ್ದ ಬೆಳ್ಳಿ ಪದಕದ ಬಳಿಕ ಮಹಿಳಾ ಕುಸ್ತಿಯಲ್ಲಿ ಭಾರತದ ಸಾಧನೆ ಮತ್ತಷ್ಟು ವಿಸ್ತರಿಸಿದೆ.

Must Read