ಹೊಸದಿಗಂತ ವರದಿ, ಚಿತ್ರದುರ್ಗ
ಹಿಂದುಗಳಿಗೆ ಅಯೋಧ್ಯೆ ಭಕ್ತಿಯ ಜೊತೆಗೆ ಶಕ್ತಿ ಕೇಂದ್ರವಾಗಿದೆ. ಹಲವಾರು ವರ್ಷಗಳ ಹೋರಾಟದ ಪ್ರತಿಫಲವಾಗಿ ಜನವರಿಯಲ್ಲಿ ಶ್ರೀರಾಮನ ಮಂದಿರ ಉದ್ಘಾಟನೆಯಾಗುತ್ತಿದೆ. ನಾವು ಧರ್ಮವನ್ನು ರಕ್ಷಿಸಿದರೆ, ಧರ್ಮವು ನಮ್ಮನ್ನು ರಕ್ಷಿಸುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಲಂಬಾಣಿ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಅಭಿಪ್ರಾಯಪಟ್ಟರು.
ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ನಗರದ ಡಿಸಿಸಿ ಬ್ಯಾಂಕ್ ಮುಂಭಾಗದಲ್ಲಿರುವ ಶ್ರೀರಾಮ ಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಯೋಧ್ಯೆಯ ಮಂತ್ರಾಕ್ಷತೆಯನ್ನು ತಾಲೂಕು ಕೇಂದ್ರಗಳಿಗೆ ವಿತರಣಾ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಅವರು ಮಾತನಾಡಿದರು.
೧೯೯೨ ರಲ್ಲಿ ನಡೆದ ರಾಮ ಮಂದಿರ ಹೋರಾಟ ನಡುಕವನ್ನುಂಟು ಮಾಡಿತ್ತು. ಅಂದು ಜನರಲ್ಲಿ ಆತಂಕ ಹಾಗೂ ಭಯ ಹುಟ್ಟಿಸಿತ್ತು. ಆದರೆ ಇಂದು ಅಯೋಧ್ಯೆ ಎನ್ನುವುದು ಹಿಂದುಗಳಿಗೆ ಶಕ್ತಿ ಕೇಂದ್ರವಾಗಿ ಹೊರ ಹೊಮ್ಮಿದೆ. ಅಯೋಧ್ಯೆ ಹಿಂದುಗಳ ಸಂಘಟನೆಯ ಕೇಂದ್ರವಾಗಿದೆ. ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೂಡ್ಡ ಪ್ರಮಾಣದ ಹೋರಾಟವೇ ನಡೆದಿದೆ. ಶ್ರೀರಾಮ ಮಂದಿರ ನಿರ್ಮಾಣದಲ್ಲಿ ಹಲವಾರು ತೊಂದರೆಗಳು ಬಂದರೂ ಸಹ ಶ್ರೀರಾಮ ಭಕ್ತಾಧಿಗಳು ಅದನ್ನು ಲೆಕ್ಕಿಸದೇ ಶ್ರೀರಾಮನ ಮಂದಿರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಹೋರಾಟಗಾರರ ಕನಸು ಜನವರಿಯಲ್ಲಿ ಸಾಕ್ಷತ್ಕಾರವಾಗಲಿದೆ ಎಂದರು.
ಅಯೋಧ್ಯೆಯ ಕರ ಸೇವೆಯಲ್ಲಿ ಹಲವಾರು ಜನ ಭಾಗಿಯಾಗಿದ್ದರು. ಅದರಲ್ಲಿ ಈಗ ಹಲವರು ಇಲ್ಲ. ಮತ್ತೆ ಕೆಲವರು ವಯೋವೃದ್ದರಾಗಿದ್ದಾರೆ. ಇವರ ಸೇವೆಯನ್ನು ನಾವುಗಳು ಸ್ಮರಣೆ ಮಾಡಬೇಕಿದೆ. ಅವರ ಹೋರಾಟದ ಫಲವಾಗಿ ನಾವುಗಳು ಜನವರಿಯಲ್ಲಿ ಶ್ರೀರಾಮ ಮಂದಿರವನ್ನು ಕಾಣುತ್ತಿದ್ದೇವೆ ಎಂದ ಶ್ರೀಗಳು, ಇಂದು ನೀಡುವ ಮಂತ್ರಾಕ್ಷತೆಯನ್ನು ಜಿಲ್ಲೆಯ ಪ್ರತಿಯೊಂದು ಮನೆ ಮನೆಗೂ ತಲುಪಿಸಬೇಕು. ಇದರಿಂದ ಅವರಲ್ಲಿ ಭಕ್ತಿ ಹೆಚ್ಚಾಗುತ್ತದೆ ಎಂದು ಹೇಳಿದರು.
ಮೇದಾರ ಗುರುಪೀಠದ ಶ್ರೀ ಇಮ್ಮಡಿ ಕೇತೇಶ್ವರ ಸ್ವಾಮೀಜಿ ಮಾತನಾಡಿ, ಹಿಂದುಗಳಿಗೆ ೨೦೨೪ರ ಜನವರಿಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆ ಐತಿಹಾಸಿಕ ದಿನವಾಗಿದೆ. ಇದರಿಂದ ಶ್ರೀರಾಮನಿಗೂ ಸಂತೋಷವಾಗಲಿದೆ. ಇದರ ಬಗ್ಗೆ ಹೋರಾಟ ಮಾಡಿದವರಿಗೂ ಸಹ ಜಯ ಸಿಗಲಿದೆ. ಶ್ರೀರಾಮನ ಚರಿತ್ರೆಯನ್ನು ಎಲ್ಲರೂ ತಿಳಿಯಬೇಕು. ಧರ್ಮವನ್ನು ಎಲ್ಲರೂ ಕಾಪಾಡಬೇಕು. ನಮಗೆ ಇಂತಹ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ಸಿಕ್ಕಿರುವುದು ಸಂತೋಷ ತಂದಿದೆ ಎಂದರು.
ವಿಶ್ವ ಹಿಂದು ಪರಿಷತ್ನ ಪ್ರಾಂತ ಸಹ ಸಂಯೋಜಕರಾದ ಪ್ರಭಂಜನ್ ಮಾತನಾಡಿ, ರಾಮಾಯಣದಲ್ಲಿ ಸಾಮನ್ಯ ಜನರ ಜೀವನದ ಹಲವಾರು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಬದುಕಿನಲ್ಲಿ ಯಾವ ರೀತಿ ಇರಬೇಕು ಎಂಬುದನ್ನು ರಾಮಾಯಣ ತಿಳಿಸುತ್ತದೆ. ಪ್ರತಿಯೊಂದು ಮನೆಯಿಂದಲೂ ಸಹ ಶ್ರೀರಾಮ ಮತ್ತು ಸೀತೆಯಂತಹ ಮಕ್ಕಳು ಹುಟ್ಟಬೇಕು. ಮನೆಯಲ್ಲಿ ರಾಮ, ಭರತರಂತಹ ಸಹೋದರರು ಇರಬೇಕು. ರಾಮ ಎಲ್ಲರಿಗೂ ಆದರ್ಶನಾಗಿದ್ದಾನೆ. ರಾಮನಲ್ಲಿ ಎಲ್ಲಾ ರೀತಿಯ ಒಳ್ಳೆಯ ಗುಣಗಳು ಇವೆ. ಮಂದಿರ ನಿರ್ಮಾಣಕ್ಕೆ ಸುಧೀರ್ಘವಾದ ಹೋರಾಟ ನಡೆದಿದ್ದು ಶ್ರೀರಾಮ ಮಂದಿರ ನಿರ್ಮಾಣಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಇದೇ ಸಂದರ್ಭಧಲ್ಲಿ ಚಿತ್ರದುರ್ಗ, ಚಳ್ಳಕೆರೆ, ಹೊಳಲ್ಕೆರೆ, ಹೊಸದುರ್ಗ, ಮೊಳಕಾಲ್ಮೂರು ಮತ್ತು ಹಿರಿಯೂರು ತಾಲ್ಲೂಕುಗಳಿಗೆ ಮಂತ್ರಾಕ್ಷಾತೆಯನ್ನು ವಿತರಣೆ ಮಾಡಲಾಯಿತು. ರಾಮ ಮಂದಿರ ಹೋರಾಟದಲ್ಲಿ ಭಾಗಿಯಾಗಿದ್ದ ಕರ ಸೇವಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಭೋವಿ ವಸತಿ ಶಾಲೆಯ ಮಕ್ಕಳು ಪ್ರಾರ್ಥಿಸಿದರು. ಕೇಶವ್ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಸ್ವಯಂ ಸೇವಕರಾದ ಮಧುಕರ್, ವಿಭಾಗ ಸಹಾ ಕಾರ್ಯದರ್ಶಿ ಚಂದ್ರಶೇಖರ್, ಸ್ವಯಂ ಸೇವಕರಾದ ನಾಗರಾಜ್, ಜಿಲ್ಲಾ ಕಾರ್ಯದರ್ಶಿ ರುದ್ರೇಶ್ ಭಾಗವಹಿಸಿದ್ದರು. ಇದಕ್ಕೂ ನಗರದ ರಾಮ ಮಂದಿರದಲ್ಲಿ ಆಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ, ಕರಪತ್ರಗಳಿಗೆ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ. ಎಸ್.ಕೆ.ಬಸವರಾಜನ್, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ಮುಖಂಡರಾದ ಅನಿತ್ ಕುಮಾರ್, ರಘುಚಂದನ್, ಡಾ.ಸಿದ್ದಾರ್ಥ ಗುಂಡಾರ್ಪಿ, ಮಲ್ಲಿಕಾರ್ಜನ್, ಸುರೇಶ್ ಸಿದ್ದಾಪುರ, ಬದರಿನಾಥ್, ಶಿವಣ್ಣಚಾರ್, ವಿಶ್ವನಾಥಯ್ಯ, ಜಿ.ಎಂ.ಸುರೇಶ್, ನಂದಿ ನಾಗರಾಜ್, ಈಶ್ವರಪ್ಪ, ರಾಮದಾಸ್, ತಿಪ್ಪೇಸ್ವಾಮಿ ಬಾಗರಾಜ್ ಬೇದ್ರೆ, ರಂಗನಾಥ್ ಸೇರಿದಂತೆ ಇತರರು ಹಾಜರಿದ್ದರು.