ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮಲಲಾ ಪ್ರಾಣಪ್ರತಿಷ್ಠಾಪನೆಗೆ ದಿನಗಣನೆ ಆರಂಭವಾಗುತ್ತಿರುವ ನಡುವೆಯೇ ಅಯೋಧ್ಯೆಯತ್ತ ಪ್ರವಾಸಿಗರ ದಂಡೂ ಹೆಚ್ಚುತ್ತಿದ್ದು, ನಗರದ ಹೃದಯಭಾಗದಲ್ಲಿ ನಿರ್ಮಿಸಲಾಗಿರುವ ಲತಾ ಮಂಗೇಶ್ಕರ್ ಚೌಕ ಈಗ ಸೆಲ್ಫಿ ಪ್ರಿಯರ ಹಾಟ್ ಸ್ಫಾಟ್ ಆಗುತ್ತಿದೆ!
ಡಿಸೆಂಬರ್ 30ರಂದು ರೋಡ್ ಶೋ ದಲ್ಲಿ ಭಾಗವಹಿಸಲು ಬಂದಿದ್ದ ಪ್ರಧಾನಿ ಮೋದಿ, ಈ ಚೌಕದ ಬಳಿ ನಿಂತು ಚಿತ್ರ ತೆಗೆಸಿಕೊಂಡಿದ್ದರು. ಅದರ ಹಿಂದಿನ ದಿನವಷ್ಟೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕೂಡಾ ಇಲ್ಲಿಯೇ ಸೆಲ್ಫಿ ತೆಗೆದುಕೊಂಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಈ ಸೆಲ್ಫಿಗಳು ಸಂಚಲನ ಮೂಡಿಸಿದ ಬೆನ್ನಿಗೇ ಸೆಲ್ಫಿ ಪ್ರಿಯರು ಇಲ್ಲಿಗೆ ಮುಗಿಬೀಳುತ್ತಿದ್ದಾರೆ.
ಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್ ಅವರ ಸ್ಮರಣಾರ್ಥವಾಗಿ ಅಯೋಧ್ಯೆಯ ನಯಾ ಘಾಟ್ ಬಳಿ ಸ್ಥಾಪಿಸಲಾಗಿರುವ ಈ ಚೌಕವು ರಾಮಪಥ ಮತ್ತು ಧರ್ಮಪಥವನ್ನು ವಿಭಾಗಿಸುತ್ತದೆ. ಇಲ್ಲಿ 4 ಟನ್ ತೂಕದ ವೀಣೆಯ ಕಲಾಕೃತಿಯನ್ನು ಸ್ಥಾಪಿಸಲಾಗಿದೆ. ಇದನ್ನು 2022ರ ಸೆ. 28ರಂದು ಪ್ರಧಾನಿ ನರೇಂದ್ರ ಮೋದಿ ಇದನ್ನು ಉದ್ಘಾಟಿಸಿದ್ದರು.