ಆಯುರ್ವೇದ ಚಿಕಿತ್ಸಾ ಪದ್ಧತಿ ಎಲ್ಲರಿಗೂ ದೊರಕುವಂತಾಗಬೇಕು: ಮಾಜಿ ಸಚಿವ ಎಂ.ಸಿ.ನಾಣಯ್ಯ

ಹೊಸದಿಗಂತ ವರದಿ, ಕೊಡಗು:

ಇಂದಿನ ಕಾಲಘಟ್ಟದಲ್ಲಿ ಜನರ ಆರೋಗ್ಯ ಸಂರಕ್ಷಣೆಗೆ ಪ್ರಾಚೀನ ಇತಿಹಾಸ ಹೊಂದಿರುವ ಆಯುರ್ವೇದ ಚಿಕಿತ್ಸಾ ಪದ್ಧತಿಯೇ ಸೂಕ್ತವಾಗಿದ್ದು, ಇದನ್ನು ಹೆಚ್ಚಿನ ರೀತಿಯಲ್ಲಿ ಜನರ ಉಪಯೋಗಕ್ಕೆ ದೊರಕವಂತೆ ಮಾಡುವ ಅಗತ್ಯವಿದೆ ಎಂದು ಮಾಜಿ ಸಚಿವ ಎಂ.ಸಿ.ನಾಣಯ್ಯ ಅಭಿಪ್ರಾಯಪಟ್ಟಿದ್ದಾರೆ.
ನಗರದ ಹೊರವಲಯದಲ್ಲಿನ ಇಬ್ಬನಿ ಕೂರ್ಗ್ ರೆಸಾರ್ಟ್’ನಲ್ಲಿ ‘ಆರೋಗ್ಯ’ ಹೆಸರಿನ ಆಯುರ್ವೇದ ಚಿಕಿತ್ಸಾ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸುಮಾರು 4 ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿರುವ ಆಯುರ್ವೇದ ಚಿಕಿತ್ಸಾ ಪದ್ಧತಿ ಕೆಲವೆಡೆ ಮೋಸಗಾರರಿಂದಾಗಿ ತನ್ನ ಹೆಸರು ಕೆಡಿಸಿಕೊಳ್ಳುತ್ತಿದೆ. ಕೊಡಗಿನಲ್ಲಿ ಅಣಬೆಯಂತೆ ಆಯುರ್ವೇದ ಚಿಕಿತ್ಸಾ ಕೇಂದ್ರ ಮತ್ತು ಸಂಬಾರ ಪದಾರ್ಥ ಮಾರಾಟದ ಮಳಿಗೆಗಳು ತಲೆ ಎತ್ತುತ್ತಿದ್ದು, ಇದರಿಂದಾಗಿ ನೈಜವಾಗಿ ಆಯುರ್ವೇದ ಚಿಕಿತ್ಸೆ ಮತ್ತು ಸಂಬಾರ ಪದಾರ್ಥ ಮಾರಾಟ ಮಾಡುವವರಿಗೆ ಧಕ್ಕೆ ಉಂಟಾಗಿದೆ ಎಂದು ವಿಷಾದಿಸಿದರು.
ಇಬ್ಬನಿ ಕೂರ್ಗ್ ರೆಸಾರ್ಟ್‌ ಒಂದೇ ಒಂದು ಸಸಿಗೂ ಧಕ್ಕೆಯುಂಟು ಮಾಡದ ರೀತಿಯಲ್ಲಿ ನಿರ್ಮಾಣವಾದ ನಾಡಿನ ಪರಿಸರ ಸ್ನೇಹಿ ರೆಸಾರ್ಟ್ ಆಗಿದ್ದು ಇಂತಹ ಪ್ರಕೃತಿ ಸ್ನೇಹಿ, ಜೀವವೈವಿಧ್ಯತೆ ಸಂರಕ್ಷಣೆಗೆ ಪಣ ತೊಟ್ಟಿರುವ ಈ ರೆಸಾರ್ಟ್‌ ಇತರ ಪ್ರವಾಸೋದ್ಯಮಿಗಳಿಗೂ ಮಾದರಿಯಾಗಿದೆ ಎಂದು ನಾಣಯ್ಯ ಬಣ್ಣಿಸಿದರು.
ರೆಸಾರ್ಟ್‌ ಮಾಲಕ ಕ್ಯಾಪ್ಟನ್ ಸೆಬಾಸ್ಟಿನ್ ಕೊಡಗಿನಲ್ಲಿ ಪ್ರಕೖತ್ತಿಗೆ ಇರುವ ಮೌಲ್ಯವನ್ನು ಅರಿತುಕೊಂಡು ನಿಸರ್ಗಕ್ಕೆ ಎಲ್ಲಿಯೂ ಧಕ್ಕೆಯಾಗದಂತೆ ಈ ರೆಸಾರ್ಟ್‌ ನಿಮಿ೯ಸಿರುವುದು ಶ್ಲಾಘನೀಯ ಎಂದೂ ನಾಣಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.
ಇಲ್ಲಿ ಹೊಸದಾಗಿ ಪ್ರಾರಂಭಿಸಿರುವ ಆರೋಗ್ಯ ಆಯುರ್ವೇದ ಚಿಕಿತ್ಸಾ ಕೇಂದ್ರ ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಚಿಕಿತ್ಸೆ ನೀಡುವಂತಾಗಲಿ ಎಂದೂ ನಾಣಯ್ಯ ಕಿವಿಮಾತು ಹೇಳಿದರು.
ಆಯುರ್ವೇದ ಐದನೇ ವೇದ: ಆರೋಗ್ಯ ಚಿಕಿತ್ಸಾ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ರೆಜಿತನ್ ಮಾತನಾಡಿ, 4 ವೇದಗಳ ನಂತರ ಆಯುರ್ವೇದ 5 ನೇ ವೇದವಾಗಿ ಪರಿಗಣಿಸಲ್ಪಟ್ಟಿದೆ. ಇದು ಆರೋಗ್ಯ ಚಿಕಿತ್ಸಾ ಪದ್ದತಿಯ ಮುಖ್ಯ ವಾಹಿನಿಯಲ್ಲಿ ಸೇರ್ಪಡೆಗೊಂಡಿದೆ ಎಂದು ಮಾಹಿತಿ ನೀಡಿದರಲ್ಲದೆ, ಆಯುರ್ವೇದದ ಉಪಯೋಗ ಅರಿತುಕೊಂಡೇ ಕೇಂದ್ರ ಸರ್ಕಾರ ಕೋವಿಡ್ ಸಂಕಷ್ಟ ಕಾಲದಲ್ಲಿ ಆಯುರ್ವೇದ ಚಿಕಿತ್ಸಾ ಪದ್ಧತಿಗೆ ಪ್ರಾಧಾನ್ಯತೆ ನೀಡಿತು ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!