ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ಬಿಡುಗಡೆ ಆದ ಕನ್ನಡದ ವೆಬ್ ಸರಣಿ ‘ಅಯ್ಯನ ಮನೆ’ ಸಖತ್ ಹಿಟ್ ಆಗಿದೆ. ಖುಷಿ ರವಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಅಯ್ಯನ ಮನೆ’ ವೆಬ್ ಸರಣಿ ಅತ್ಯಂತ ಕಡಿಮೆ ಸಮಯದಲ್ಲಿ ಹೆಚ್ಚು ಜನರಿಂದ ವೀಕ್ಷಣೆ ಪಡೆದು ಒಟಿಟಿಯಲ್ಲಿ ಹೊಸ ದಾಖಲೆ ಬರೆದಿದೆ.
ZEE5 ಒಟಿಟಿಯಲ್ಲಿ ‘ಅಯ್ಯನ ಮನೆ’ ವೆಬ್ ಸರಣಿ ಕಳೆದ ವಾರವಷ್ಟೆ ಬಿಡುಗಡೆ ಆಗಿದೆ. ಅದಕ್ಕೆ ಭರಪೂರ ಪ್ರತಿಕ್ರಿಯೆ ವೀಕ್ಷಕರಿಂದ ಸಿಗುತ್ತಿದೆ. ‘ಅಯ್ಯನ ಮನೆ’ ಮಿನಿ ವೆಬ್ ಸರಣಿಯಾಗಿದ್ದು, ಮೊದಲ ಪ್ರಯತ್ನಕ್ಕೆ ಜನರಿಂದ ಮೆಚ್ಚುಗೆ ದೊರೆತಿದೆ. ಆ ಮೂಲಕ ಇನ್ನಷ್ಟು ಹೊಸ ತಂಡಗಳು ವೆಬ್ ಸರಣಿ ನಿರ್ಮಾಣಕ್ಕೆ ಪ್ರಯತ್ನಿಸಲು ಸ್ಪೂರ್ತಿ ದೊರೆತಿದೆ.
ಏಪ್ರಿಲ್ 25ರಂದು ‘ಅಯ್ಯನ ಮನೆ’ ವೆಬ್ ಸರಣಿ ಜೀ5 ನಲ್ಲಿ ಸ್ಟ್ರೀಮಿಂಗ್ ಆರಂಭಿಸಿತ್ತು. ಅಲ್ಲಿಂದ ಇಲ್ಲಿವರೆಗೆ 50 ಮಿಲಿಯನ್ ಸ್ಟ್ರೀಮಿಂಗ್ ಮಿನಿಟ್ ಕಾಣುವ ಮೂಲಕ ಹೊಸ ದಾಖಲೆ ಸೃಷ್ಟಿ ಮಾಡಿದೆ ಈ ವೆಬ್ ಸರಣಿ. ಪ್ರಾದೇಶಿಕ ಭಾಷೆಯ ವೆಬ್ ಸರಣಿಯೊಂದು ಈ ಮಟ್ಟದ ವೀಕ್ಷಣೆ ಕಂಡಿರುವುದು ಸರಳ ಸಾಧನೆಯಲ್ಲ, ಈ ಸಾಧನೆ ಸಹಜವಾಗಿಯೇ ‘ಅಯ್ಯನ ಮನೆ’ ತಂಡಕ್ಕೆ ಖುಷಿ ತಂದಿದೆ.