ಅಂದು ಮೋದಿ ಬಾಹ್ಯಾಕಾಶದಲ್ಲಿ ಬಾವುಟ ಹಾರಿಸ್ತೀವಿ ಅಂದಿದ್ರಲ್ಲಾ ಏನಾಯ್ತು?!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ  75ನೇ ಸ್ವಾತಂತ್ರ್ಯೋತ್ಸವದ ಹೊತ್ತಲ್ಲಿ ಬಾಹ್ಯಾಕಾಶದಲ್ಲಿಯೂ ನಾವು ರಾಷ್ಟ್ರಧ್ವಜ ಹಾರಿಸಲಿದ್ದೇವೆ ಎಂದು 2018 ಆಗಸ್ಟ್ 15ರಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಬಾಹ್ಯಾಕಾಶದಲ್ಲಿಯೂ ರಾಷ್ಟ್ರಧ್ವಜ ಹಾರಿಸುವ ಆ ಕನಸು ನನಸಾಗುವುದಕ್ಕೆ ದಿನಗಣನೆ ಆರಂಭವಾಗಿದೆ.

ಇಸ್ರೋ ಆ.7 ರಂದು ಗ್ರಾಮೀಣ ಶಾಲೆಯ 750 ಹೆಣ್ಣುಮಕ್ಕಳೇ ತಯಾರಿಸಿರುವ ಅತ್ಯಂತ ಚಿಕ್ಕ ಆಜಾದಿ ಉಪಗ್ರಹಗಳನ್ನು ಸ್ಮಾಲ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ವಾಹಕದ ಮೂಲಕ ಹಾರಿಬಿಡುತ್ತಿದೆ. ಭಾರತ 75ನೇ ಅಮೃತ ಮಹೋತ್ಸವ ಆಚರಿಸುತ್ತಿರುವ ನೆನಪಿನಾರ್ಥವಾಗಿ ಗ್ರಾಮೀಣ ಭಾಗದ 75 ಸರ್ಕಾರಿ ಶಾಲೆಗಳ 750 ವಿದ್ಯಾರ್ಥಿನಿಯರು ಸೇರಿ ತಯಾರಿಸಿರುವ 8 ಕೆಜಿ ತೂಕದ ‘ಆಜಾದಿ ಸ್ಯಾಟ್ ಉಪಗ್ರಹವನ್ನು ಕಕ್ಷೆಗೆ ಕೊಂಡೊಯ್ಯಲಿದೆ.

ಈ ವಾಹಕವು ತ್ರಿವರ್ಣ ಧ್ವಜವನ್ನೂ ನಭಕ್ಕೆ ಹೊತ್ತೊಯ್ಯಲಿದೆ. ಈ ಹೊಸ ಪ್ರಯತ್ನದ ಮೂಲಕ ವಿಶ್ವದ ಚಿಕ್ಕ ರಾಕೆಟ್‌ಗಳ ಮಾರುಕಟ್ಟೆಗೆ ಅಡಿ ಇಡಲು ಇಸ್ರೋ ಸಜಗಿದೆ. ಇದು ಎಸ್‌ಎಸ್‌ಎಲ್‌ವಿಯ ಮೊದಲ ಉಡಾವಣೆಯಾಗಿದ್ದು, 145 ಕೆಜಿ ತೂಕದ ಭೂ ಪರಿವೀಕ್ಷಣಾ ಉಪಗ್ರಹ ಹಾಗೂ ‘ಆಜಾದಿ ಸ್ಯಾಟ್‘ಗಳನ್ನು ಹೊತ್ತೊಯ್ಯಲಿದೆ ಎಂದು ಹೇಳಲಾಗಿದೆ. ಅಲ್ಲದೇ ಎಸ್‌ಎಸ್‌ಎಲ್‌ವಿ ಕಡಿಮೆ ಸುತ್ತುವ ಅವಧಿಯನ್ನು ಹೊಂದಿದ್ದು, ಕಡಿಮೆ ಎತ್ತರದ ಕಕ್ಷೆಗಳಿಗೆ ಉಪಗ್ರಹವನ್ನು ಸೇರಿಸುವ ಬಾಹ್ಯಾಕಾಶ ಬೇಡಿಕೆಯನ್ನು ಯಶಸ್ವಿಯಾಗಿ ಪೂರೈಸಲಿದೆ ಎಂದು ಇಸ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆ.7ರಂದು ಮುಂಜನೆ 9.18ಕ್ಕೆ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಈ ರಾಕೆಟ್ ಅನ್ನು ಉಡಾವಣೆ ಮಾಡಲಾಗುತ್ತದೆ. ಸುಮಾರು 13.2 ನಿಮಿಷಗಳ ಹಾರಾಟದ ಬಳಿಕ ಉಪಗ್ರಹಗಳನ್ನು ಈ ರಾಕೆಟ್ ಕಕ್ಷೆಗೆ ತಲುಪಿಸಲಿದೆ.

ಪಿಎಸ್‌ಎಲ್‌ವಿಗಿಂತ ಬರೋಬ್ಬರಿ 10 ಮೀ. ಚಿಕ್ಕದಾಗಿರುವ ಎಸ್‌ಎಸ್‌ಎಲ್‌ವಿ ಕೇವಲ 34 ಮೀ. ಉದ್ದ ಹಾಗೂ 2 ಮೀ. ವ್ಯಾಸವನ್ನು ಹೊಂದಿದೆ. ಈ ರಾಕೆಟ್ ಒಟ್ಟು 120 ಟನ್ ತೂಕವಿದ್ದು, ಸುಮಾರು 500 ಕೇಜಿ ಪೇಲೋಡ್ ಅನ್ನು 500 ಕಿ.ಮೀ. ದೂರದಲ್ಲಿರುವ ಕಕ್ಷೆಗೆ ತಲುಪಿಸುವ ಸಾಮರ್ಥ್ಯ ಹೊಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!