ಹೊಸದಿಗಂತ ವರದಿ, ಕೆ.ಆರ್.ಪೇಟೆ:
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಬಹು ವರ್ಷಗಳ ನಂತರ ಮನೆದೇವರ ದರುಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ತಾಲ್ಲೂಕಿನ ಬೂಕನಕೆರೆ ಹೋಬಳಿಯ ಗವಿಮಠದಲ್ಲಿರುವ ಪವಾಡ ಪುರುಷ ಶ್ರೀ ಸ್ವತಂತ್ರ ಸಿದ್ದಲಿಂಗೇಶ್ವರ ದೇವಾಲಯಕ್ಕೆ ಶಾಸಕ ಹೆಚ್.ಟಿ ಮಂಜು ಜೊತೆಯಲ್ಲಿ ಭೇಟಿ ನೀಡಿ ಗವಿಮಠದ ಪೀಠಾಧ್ಯಕ್ಷ ಶ್ರೀ ಚನ್ನವೀರ ಮಹಾಸ್ವಾಮಿ ದಿವ್ಯ ಸಾನಿಧ್ಯದಲ್ಲಿ ತಮ್ಮ ಮನೆ ದೇವರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಶೇಷ ಪೂಜೆ ಸಲ್ಲಿಸಿದರು.
ದೇವಾಲಯದ ಮುಂದೆ ಹರಿಯುತ್ತಿರುವ ಹಳ್ಳದಲ್ಲಿ ಗಿಡ ಗೆಡ್ಡೆಗಳ ತುಂಬಿಕೊಂಡಿರುವ ವ್ಯವಸ್ಥೆಯ ನೋಡಿ ಬೇಸರಗೊಂಡ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಈ ಕ್ಷೇತ್ರ ಪವಾಡ ಪುರುಷರ ನೆಲೆಬೀಡು ಸದಾ ಸ್ವಚ್ಛತೆಯಿಂದ ಕಂಗೊಳಿಸಬೇಕು ಎಂದು ಅಭಿಪ್ರಾಯಪಟ್ಟು ಹಳ್ಳವನ್ನು ಶೀಘ್ರವೇ ಸ್ವಚ್ಛಗೊಳಿಸುವಂತೆ ವ್ಯಾಪ್ತಿಯ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ತಿಳಿಸಿ ಎಂದು ಸ್ಥಳೀಯ ಮುಖಂಡರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಶಾಸಕ ಹೆಚ್.ಟಿ ಮಂಜು, ಕೆ.ಎಂಎಫ್ ಮಾಜಿ ನಿರ್ದೇಶಕ ಅಶೋಕ್,ತಾ. ಪಂ ಮಾಜಿ ಸದಸ್ಯ ಬೂಕನಕೆರೆ ಹುಲ್ಲೇಗೌಡ,ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್,ಹಿರಿಯ ಮುಖಂಡ ತೋಟಪ್ಪಶೆಟ್ಟಿ, ಮೆಳ್ಳಹಳ್ಳಿ ರವಿ ಕುಮಾರ್,ಕರೋಟಿ ಸುಬ್ರಮಣ್ಯ, ಪುರೋಹಿತ ಹೇಮಂತ್ ಕುಮಾರ್ ಇತರರಿದ್ದರು.