Wednesday, February 1, 2023

Latest Posts

ʼಬಾಬರ್ ಆಜಂ ದೊಡ್ಡ ಜೀರೋ, ಆತನನ್ನು ವಿರಾಟ್ ಕೊಹ್ಲಿಗೆ ಹೋಲಿಸುವುದು ನಿಲ್ಲಿಸಿʼ: ಪಾಕ್ ಮಾಜಿ ಕ್ರಿಕೆಟಿಗ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಬಾಬರ್‌ ಅಜಂ ನೇತೃತ್ವದ ಪಾಕ್‌ ತಂಡಕ್ಕೆ ಬಾರಿ ಮುಖಭಂಗ ಎದುರಾಗಿದೆ. ಪಾಕ್‌ ತಂಡವನ್ನು ತವರಿನ ನೆಲದಲ್ಲೇ ಬಗ್ಗು ಬಡಿದ ಪ್ರವಾಸಿ ಇಂಗ್ಲೆಂಡ್‌ 3-0 ಅಂತರದಿಂದ ಟೆಸ್ಟ್ ಸರಣಿ ಗೆದ್ದು ಕ್ಲೀನ್‌ ಸ್ವಿಪ್‌ ಮಾಡಿದೆ. ಸರಣಿಯಲ್ಲಿ ಪಾಕಿಸ್ತಾನದ ಪ್ರದರ್ಶನಕ್ಕೆ ಟೀಕೆಗಳ ಸುರಿಮಳೆಯಾಗುತ್ತಿದೆ. ಪಾಕ್‌ ಪ್ರದರ್ಶನದಿಂದ ರೊಚ್ಚಿಗೆದ್ದಿರುವ ಮಾಜಿ ಕ್ರಿಕೆಟಿಗರು ಪಾಕ್‌ ತಂಡವನ್ನು ಹಿಗ್ಗಮುಗ್ಗಾ ಟೀಕಿಸುತ್ತಿದ್ದಾರೆ. ಅದರಲ್ಲೂ ಒಂದು ಹೆಜ್ಜೆ ಮುಂದಿಟ್ಟಿರುವ ಮಾಜಿ ಸ್ಪಿನ್ನರ್ ಡ್ಯಾನಿಶ್ ಕನೇರಿಯಾ, ಬಾಬರ್ ದೊಡ್ಡ ಜೀರೋ.., ಆತನನ್ನು ವಿರಾಟ್ ಕೊಹ್ಲಿಗೆ ಹೋಲಿಸುವುದನ್ನು ನಿಲ್ಲಿಸುವಂತೆ ಜನರಿಗೆ ಸಲಹೆ ನೀಡಿದ್ದಾರೆ.
“ಜನರು ಬಾಬರ್ ಅಜಮ್ ಅವರನ್ನು ವಿರಾಟ್ ಕೊಹ್ಲಿಗೆ ಹೋಲಿಸುವುದನ್ನು ನಿಲ್ಲಿಸಬೇಕು. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹವರು ಬಹಳ ದೊಡ್ಡ ಆಟಗಾರರು. ಪಾಕಿಸ್ತಾನ ತಂಡದಲ್ಲಿ ಅವರಿಗೆ ಹೋಲಿಸುವಂತವರು ಯಾರೂ ಇಲ್ಲ. ನೀವು ಪಾಕ್‌ ಆಟಗಾರಿಗೆ ಹೀಗೆಲ್ಲ ಬಹುಪರಾಕ್‌ ಹೇಳುತ್ತಿದ್ದರೆ, ಅವರು ರಾಜರಂತೆ ಮೆರೆಯುತ್ತಾರೆ. ಆದರೆ ಆಟದ ಫಲಿತಾಂಶಗಳತ್ತ ನೋಡಿದರೆ ಜೀರೋ ಆಗಿರುತ್ತದೆ”ಎಂದು ಕನೇರಿಯಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಕಿಡಿಕಾರಿದ್ದಾರೆ.
ನಾಯಕತ್ವ ವಿಚಾರಕ್ಕೆ ಬಂದರೆ ಬಾಬರ್ “ದೊಡ್ಡ ಸೊನ್ನೆ” ಎಂದು ಕನೇರಿಯಾ ಬಣ್ಣಿಸಿದ್ದಾರೆ. ಈ ಸರಣಿಯಲ್ಲಿ ಪಾಕಿಸ್ತಾನದ ನಾಯಕ ಬ್ರೆಂಡನ್ ಮೆಕಲಮ್ ಮತ್ತು ಬೆನ್ ಸ್ಟೋಕ್ಸ್ ಅವರಿಂದ ಬಾಬರ್ ಕಲಿಯಬೇಕಿತ್ತು ಎಂದು ಅವರು ಪ್ರತಿಪಾದಿಸಿದ್ದಾರೆ.
“ಬಾಬರ್ ಅಜಮ್ ನಾಯಕನಾಗಿ ದೊಡ್ಡ ಶೂನ್ಯ. ಅವರು ತಂಡವನ್ನು ಮುನ್ನಡೆಸಲು ಅರ್ಹರಲ್ಲ, ಅವರು ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿಲ್ಲ, ವಿಶೇಷವಾಗಿ ಟೆಸ್ಟ್ ಕ್ರಿಕೆಟ್‌ಗೆ ಬಂದಾಗ, ಬೆನ್ ಸ್ಟೋಕ್ಸ್ ಅವರನ್ನು ನೋಡಿ ನಾಯಕತ್ವವನ್ನು ಕಲಿಯುವ ಉತ್ತಮ ಅವಕಾಶವಿದೆ. ಸರಣಿಯ ಸಮಯದಲ್ಲಿ ಅವರು ತಮ್ಮ ಅಹಂಕಾರವನ್ನು ಬದಿಗಿಟ್ಟು ಮೆಕಲಮ್‌ ಅಥವಾ ಸರ್ಫರಾಜ್ ಅಹ್ಮದ್ ಬಳಿ ಹೇಗೆ ನಾಯಕತ್ವ ನಿಭಾಯಿಸಬೇಕು ಎಂಬುದನ್ನು ಕೇಳಬಹುದಿತ್ತು” ಎಂದು ಕನೇರಿಯಾ ಹೇಳಿದ್ದಾರೆ.
ಪಾಕಿಸ್ತಾನದ ಮಾಜಿ ಸ್ಪಿನ್ನರ್ ಬಾಬರ್ ಇನ್ನು ಮುಂದೆ ಆಟದ ದೀರ್ಘ ಸ್ವರೂಪ(ಟೆಸ್ಟ್)‌ ಅನ್ನು ಆಡಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!