ಹೊಸದಿಗಂತ ಡಿಜಿಟಲ್ ಡೆಸ್ಕ್
1833 ರಿಂದ 1858 ರ ವರೆಗೆ ಜೀವಿಸಿದ್ದ ಬಾಬುರಾವ್ ಶೆಡ್ಮಾಕೆ 1858ರಲ್ಲಿ ಬ್ರಿಟೀಷರ ವಿರುದ್ಧ ಭಾರತೀಯರು ನಡೆಸಿದ ʼಪ್ರಥಮ ಸ್ವಾತಂತ್ರ್ಯ ಹೋರಾಟʼದಲ್ಲಿ ಪರಾಕ್ರಮ ಮೆರೆದಿದ್ದ ಧೀರ ಸೇನಾನಿ.
ಮಧ್ಯ ಭಾರತದ (ಮಹಾರಾಷ್ಟ್ರದ ಆಸುಪಾಸು) ಗೊಂಡ್ವಾನಾ ಪ್ರದೇಶದಲ್ಲಿ ಹರಡಿರುವ ಗೊಂಡ ಜಮೀನುದಾರ ಸಮುದಾಯದ ಮುಖ್ಯಸ್ಥರಾದ ಬಾಬು ಶೆಡ್ಮಾಕೆ, 1857 ರ ಹೋರಾಟದ ಸಂದರ್ಭದಲ್ಲಿ ಚಂದಾ ಜಿಲ್ಲೆಯಲ್ಲಿ ರೈತರನ್ನು ಸಂಘಟಿಸಿ ಕ್ರಾಂತಿಯನ್ನು ಮುನ್ನಡೆಸಿದರು. ಅವರು 1858 ನೇ ಇಸವಿಯ ಏಳು ತಿಂಗಳ ಅವಧಿಯಲ್ಲಿ ಬ್ರಿಟಿಷರ ವಿರುದ್ಧ ಅನೇಕ ಯುದ್ಧಗಳನ್ನು ಮುನ್ನಡೆಸಿದರು. ಶೆಡ್ಮಾಕೆ ನೇತೃತ್ವದ ರೈತರ ಸೈನ್ಯ ಬ್ರಿಟೀಷರ ಸೈನ್ಯಕ್ಕೆ ಅಪಾರ ಹಾನಿ ಉಂಟು ಮಾಡಿತ್ತಲ್ಲದೆ, ಬ್ರಿಟೀಷರು ಈ ಸೈನ್ಯದ ವಿರುದ್ಧ ಹಲವಾರು ಬಾರಿ ಮುಖಭಂಗ ಅನುಭವಿಸಿದರು. ಆದರೆ ಸಂಗ್ರಾಮದ ನಿರ್ಣಾಯಕ ಘಟ್ಟದಲ್ಲಿ ಶೆಡ್ಮಾಕೆ ಸೆರೆಸಿಕ್ಕರು. ಇದು ಭಾರತೀಯರ ಹೋರಾಟಕ್ಕೂ ಹಿನ್ನಡೆ ತಂದಿತು.
ನಿರ್ದಯಿ ಬ್ರಿಟೀಷ್ ಸರ್ಕಾರ ದಂಗೆಯ ಆಪಾದನೆಯ ಮೇಲೆ ಭಾರತಾಂಬೆಯ ಹೆಮ್ಮೆಯ ಪುತ್ರನನ್ನು ಗಲ್ಲುಗಂಬದತ್ತ ಅಟ್ಟಿತು. ಆದರೆ ಬಾಬುರಾವ್ ಭಾರತೀಯ ಜನಮಾನಸದಲ್ಲಿ ಅಮರರಾಗುಳಿದಿದ್ದಾರೆ. ಬಾಬುರಾವ್ ಶೆಡ್ಮಕೆಯವರ ಜೀವನ ಮತ್ತು ಪರಕೀಯ ಆಡಳಿತದ ವಿರುದ್ಧ ಅವರ ಪರಾಕ್ರಮವನ್ನು ಗೊಂಡ ಸಮುದಾಯವು ಇಂದಿಗೂ ಹೆಮ್ಮೆಯಿಂದ ಸ್ಮರಿಸುತ್ತದೆ. ಅವರ ಶೌರ್ಯದ ಗುರುತಾಗಿ ಹೆಸರಿನ ಮುಂದೆ ಸೋಬ್ರಿಕ್ವೆಟ್ ವೀರ (ಅಮಿತ ಧೈರ್ಯಶಾಲಿ) ಎಂಬ ವಿಶೇಷಣವನ್ನು ಸೇರಿಸಿ ಗೌರವಿಸಲಾಗುತ್ತದೆ. ಬಾಬುರಾವ್ ಅವರ ಜನ್ಮದಿನ ಮತ್ತು ಮರಣ ವಾರ್ಷಿಕೋತ್ಸವಗಳನ್ನು ಗೊಂಡ್ವಾನಾ ಪ್ರದೇಶದಾದ್ಯಂತ ಹಬ್ಬದಂತೆ ಆಚರಿಸಲಾಗುತ್ತಿದೆ.