ಹೊಸದಿಂಗತ ಡಿಜಿಟಲ್ ಡೆಸ್ಕ್:
ಸುಸಜ್ಜಿತ ವ್ಯವಸ್ಥೆ, ಐಷಾರಾಮಿ ಸೌಕರ್ಯಗಳು ಹಾಗೂ ವೇಗದ ಕಾರಣಕ್ಕಾಗಿ ದೇಶಾದ್ಯಂತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸುದ್ದಿಯಾಗುತ್ತಿವೆ. ಜನರಿಂದಲೂ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಆದರೆ, ಇತ್ತೀಚೆಗೆ ವಂದೇ ಭಾರತ್ ರೈಲುಗಳಲ್ಲಿ ಸ್ವಚ್ಛತೆ ಕುರಿತು ಆಕ್ಷೇಪಗಳು ವ್ಯಕ್ತವಾಗುತ್ತಿವೆ. ಇದರ ಬೆನ್ನಲ್ಲೇ, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಕಳಪೆ ಆಹಾರ ನೀಡಿದ ಆರೋಪ ಕೇಳಿಬಂದಿದೆ. ಪ್ರಯಾಣಿಕರೊಬ್ಬರು ಈ ಕುರಿತು ವಿಡಿಯೊ ಹಂಚಿಕೊಂಡಿದ್ದು, ನನ್ನ ದುಡ್ಡು ವಾಪಸ್ ಕೊಡಿ ಎಂದು ಆಗ್ರಹಿಸಿದ್ದಾರೆ.
ದೆಹಲಿಯಿಂದ ವಾರಾಣಸಿಗೆ ಹೊರಟಿದ್ದ ಅಕಾಶ್ ಕೆಶಾರಿ ಎಂಬ ಪ್ರಯಾಣಿಕರು ತಮಗೆ ಕಳಪೆ ಹಾಗೂ ಹಳಸಿದ ಆಹಾರ ಪೂರೈಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಅವರು ಎರಡು ವಿಡಿಯೊಗಳನ್ನೂ ಹಂಚಿಕೊಂಡಿದ್ದಾರೆ. “ನಾನು ದೆಹಲಿಯಿಂದ ವಾರಾಣಸಿ ರೈಲಿನಲ್ಲಿ ಪ್ರಯಾಣಿಸಿದೆ. ರೈಲಿನಲ್ಲಿ ನನಗೆ ಭಾರಿ ಕಳಪೆ ಹಾಗೂ ಹಳಸಿದ ಆಹಾರವನ್ನು ನೀಡಿದ್ದಾರೆ. ದಯಮಾಡಿ ನನ್ನ ಹಣ ರಿಫಂಡ್ ಮಾಡಿ. ಈ ವ್ಯಾಪಾರಿಗಳು ವಂದೇ ಭಾರತ್ ರೈಲಿನ ಬ್ರ್ಯಾಂಡ್‌ಗೆ ಮಸಿ ಬಳಿಯುತ್ತಿದ್ದಾರೆ” ಎಂದು ಪೋಸ್ಟ್ ಮಾಡಿದ್ದಾರೆ.