ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರದ ನಮ್ಮ ಮೆಟ್ರೋ ರೈಲು ದರ ಏರಿಕೆ ಬಗ್ಗೆ ಪ್ರಸ್ತಾಪ ಮಾಡಿದ್ದು, ಶೀಘ್ರದಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆಯಾಗುವ ಸಾಧ್ಯತೆಯಿದೆ.
ಹಲವಾರು ಬಾರಿ ಮೆಟ್ರೋ ದರ ಏರಿಕೆ ಬಗ್ಗೆ ಬಿಎಂಆರ್‌ಸಿಎಲ್ ಪ್ರಸ್ತಾಪಿಸಿತ್ತು. ಆದರೆ ಕಳೆದ ಹಲವು ವರ್ಷಗಳಿಂದ ದರ ಏರಿಕೆ ಮಾಡಿರಲಿಲ್ಲ. ಸದ್ಯ ಈ ಬಾರಿ ದರ ಏರಿಕೆ ಮಾಡಲು ಮುಂದಾಗಿದೆ.
ಮೆಟ್ರೋ ದರ ನಿಗದಿ ಸಮಿತಿಯನ್ನು ರಚಿಸಿದ್ದು 15% ರಿಂದ 20% ರಷ್ಟು ಟಿಕೆಟ್ ದರ ಏರಿಕೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಈ ಕುರಿತು ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ್ ಚೌಹಾನ್ ಮಾತನಾಡಿ, ರಾಜ್ಯ ಹಾಗೂ ಕೇಂದ್ರದ ಹಿರಿಯ ಅಧಿಕಾರಿಗಳು, ನಿವೃತ್ತ ನ್ಯಾಯಾಧೀಶರನ್ನು ಒಳಗೊಂಡು ದರ ಏರಿಕೆ ಬಗ್ಗೆ ಕಮಿಟಿ ಆಗಿದೆ. ಇದೊಂದು ಸ್ವತಂತ್ರ ಸಮಿತಿಯಾಗಿದ್ದು, ಒಂದು ಸಭೆ ಕೂಡಾ ಆಗಿದೆ. ಕಮಿಟಿ ಶೀಘ್ರದಲ್ಲೇ ವರದಿ ನೀಡಲಿದ್ದು, ವರದಿ ಆಧಾರದ ಮೇಲೆ ದರ ಏರಿಕೆ ಆಗಲಿದೆ. ಕಮಿಟಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಮಾಡಲಿದೆ. ನಮ್ಮ ಖರ್ಚು ವೆಚ್ಚ ನೋಡಿಕೊಂಡು ದರ ಏರಿಕೆ ಮಾಡಲಿದ್ದೇವೆ. ಇನ್ನೂ ಮೂರು ತಿಂಗಳ ಒಳಗಾಗಿ ದರ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಅ.21 ರೊಳಗೆ ಪ್ರಯಾಣಿಕರು ಬಿಎಂಆರ್ಸಿಎಲ್‌ಗೆ ತಮ್ಮ ಅಭಿಪ್ರಾಯ ತಿಳಿಸಲು ಕಾಲಾವಕಾಶ ನೀಡಿದ್ದು, ಸಲಹೆಯನ್ನ [email protected] ಇಮೇಲ್‌ಗೆ ಕಳಿಸುವಂತೆ ತಿಳಿಸಿದೆ.