ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬದ್ಲಾಪುರ್ ನಲ್ಲಿ ತೀವ್ರ ಪ್ರತಿಭಟನೆ ನಡೆಸಿ ರೈಲು ನಿಲ್ದಾಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿ ರೈಲು ಸಂಚಾರ ತಡೆದು ಕಲ್ಲು ತೂರಾಟಕ್ಕೆ ಕಾರಣವಾಗಿದ್ದ ಖಾಸಗಿ ಶಾಲೆಯ ನರ್ಸರಿ ತರಗತಿಯ 4 ವರ್ಷದ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ನಡೆದ ಮರುದಿನವಾದ ಇಂದು ಬುಧವಾರ ಪರಿಸ್ಥಿತಿ ಸಹಜತೆಗೆ ಮರಳುತ್ತಿದೆ.
ಯಾವುದೇ ಅಹಿತಕರ ಘಟನೆ ಪುನರಾವರ್ತನೆ ಸಾಧ್ಯತೆಯಿರುವುದರಿಂದ ನಿನ್ನೆ ದುರ್ಘಟನೆ ನಡೆದ ಬದ್ಲಾಪುರ್ ರೈಲು ನಿಲ್ದಾಣದಲ್ಲಿ ಇಂದು ತೀವ್ರ ಪೊಲೀಸ್ ಭದ್ರತೆಯನ್ನು ಕಲ್ಪಿಸಲಾಗಿದೆ. ಶಾಲೆಯೊಂದರಲ್ಲಿ ಇಬ್ಬರು ಪುಟ್ಟ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ನಡೆದ ತೀವ್ರ ‘ರೈಲ್ ರೋಕೋ’ ಪ್ರತಿಭಟನೆಯ ಒಂದು ದಿನದ ನಂತರ ಬದ್ಲಾಪುರ್ ರೈಲು ನಿಲ್ದಾಣದಲ್ಲಿ ಪರಿಸ್ಥಿತಿ ಇಂದು ಸಹಜ ಸ್ಥಿತಿಗೆ ಮರಳಿದೆ.
ವಾಶ್‌ರೂಮ್‌ನಲ್ಲಿ ಶಾಲಾ ಸ್ವೀಪರ್‌ನಿಂದ ನಾಲ್ಕು ವರ್ಷದ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ನಿನ್ನೆ ಮಂಗಳವಾರ ಸಾವಿರಾರು ಪ್ರತಿಭಟನಾಕಾರರು ಬದ್ಲಾಪುರ್ ನಿಲ್ದಾಣದಲ್ಲಿ ರೈಲು ಹಳಿಗಳನ್ನು ತಡೆದು ಪ್ರತಿಭಟನೆ ಮಾಡಿದ್ದರು.