ಒಲಿಂಪಿಕ್ಸ್​ಗೆ ಬ್ಯಾಡ್ಮಿಂಟನ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ವಿದಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಹಿರಿಯ ಬ್ಯಾಡ್ಮಿಂಟನ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ಅವರು ಒಲಿಂಪಿಕ್ಸ್​ಗೆ ವಿದಾಯ ಘೋಷಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ ಪೊನ್ನಪ್ಪ, ‘ಇದು ನನ್ನ ಕೊನೆಯ ಒಲಿಂಪಿಕ್ಸ್‌’ ಎಂದು ಹೇಳಿದ್ದಾರೆ. ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ತನಿಶಾ ಕ್ರಾಸ್ಟೊ ಅವರೊಂದಿಗೆ ಡಬಲ್ಸ್‌ನಲ್ಲಿ ಮೂರು ಸತತ ಸೋಲು ಅನುಭವಿಸಿ ಪರಾಭವಗೊಂಡ ಬೆನ್ನಲ್ಲೇ ಅವರು ತಮ್ಮ ನಿವೃತ್ತಿ ಪ್ರಕಟಿಸಿದ್ದಾರೆ.
ಅಶ್ವಿನಿ ಹಾಗೂ ತನಿಶಾ ಜೋಡಿಯು ಆಸ್ಟ್ರೇಲಿಯಾದ ಸೆತ್ಯಾನಾ ಮಾಪಸಾ ಹಾಗೂ ಏಂಜೆಲಾ ಯು ಜೋಡಿ ವಿರುದ್ಧ 15-21, 10-21 ನೇರ ಸೇಟ್‌ನಲ್ಲಿ ಸೋಲು ಕಂಡು 2024ರ ಒಲಿಂಪಿಕ್ಸ್‌ನಿಂದ ಈ ಜೋಡಿ ಹೊರಬಿದ್ದಿತು. ಈ ಸೋಲಿನ ಬಳಿಕ 34 ವರ್ಷದ ಅಶ್ವಿನಿ ಪೊನ್ನಪ್ಪ 2028ರಲ್ಲಿ ಲಾಸ್‌ಏಂಜಲೀಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಆಡದಿರಲು ನಿರ್ಧರಿಸಿದ್ದಾರೆ.

‘ಇದು ನನ್ನ ಕೊನೆಯ ಒಲಿಂಪಿಕ್ಸ್‌. ಆದರೆ ತನಿಷಾ ಅವರ ಕ್ರೀಡೆಯ ಹಾದಿ ಇನ್ನೂ ಸುದೀರ್ಘವಿದೆ. ಈ ಬಾರಿಯ ಸೋಲು ನನ್ನ ಮನಸ್ಸು ಹಾಗೂ ಭಾವನೆಗಳ ಮೇಲೆ ಭಾರೀ ಆಘಾತ ಉಂಟು ಮಾಡಿದೆ. ಇಂಥ ಪರಿಸ್ಥಿತಿಯನ್ನು ಮತ್ತೆ ಎದುರಿಸಲಾರೆ. ಅದು ಸುಲಭವೂ ಅಲ್ಲ. ಕಿರಿಯ ವಯಸ್ಸಿನವರಾದರೆ ಇವೆಲ್ಲವನ್ನೂ ಸಹಿಸಿಕೊಳ್ಳಬಹುದು. ಸಾಕಷ್ಟು ವರ್ಷಗಳ ಕಾಲ ದೇಶಕ್ಕಾಗಿ ಆಡಿದ ಖುಷಿ ಇದೆ. ಇನ್ನು ಸಾಗುವುದು ಕಷ್ಟ’ ಎಂದು ಹೇಳುವ ಮೂಲಕ ಅವರು ತಮ್ಮ ನಿವೃತ್ತಿಯನ್ನು ಪ್ರಕಟಿಸಿದರು. ಒಲಿಂಪಿಕ್ಸ್​ ಹೊರತುಪಡಿಸಿ ಉಳಿದ ಟೂರ್ನಿಯಲ್ಲಿ ಆಟ ಮುಂದುವರಿಸುವಾಗಿ ಹೇಳಿದ್ದಾರೆ.

ಅಶ್ವಿನಿ ಅವರು 2001ರಲ್ಲಿ ಮೊದಲ ರಾಷ್ಟ್ರೀಯ ಪದಕ ಜಯಿಸಿದ್ದರು. 2017ರವರೆಗೂ ಜ್ವಾಲಾ ಗುಟ್ಟ ಹಾಗೂ ಅಶ್ವಿನಿ ಪೊನ್ನಪ್ಪ ಜೋಡಿ ಹಲವು ಇತಿಹಾಸಗಳನ್ನು ನಿರ್ಮಿಸಿತ್ತು. 2010ರಲ್ಲಿ ದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಕಂಚು, 2014 ಹಾಗೂ 2016ರಲ್ಲಿ ಉಬರ್ ಕಪ್ ಹಾಗೂ 2014ರಲ್ಲಿ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲೂ ಪದಕ ಪಡೆದಿದ್ದರು. ವಿಶ್ವ ಬ್ಯಾಡ್ಮಿಂಟನ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಈ ಜೋಡಿ ಮೊದಲ 20ರಲ್ಲಿ ಸ್ಥಾನ ಪಡೆದಿತ್ತು. 2012 ಹಾಗೂ 2016ರಲ್ಲೂ ಈ ಜೋಡಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿತ್ತು. ಜ್ವಾಲಾ ಗುಟ್ಟ ನಿವೃತ್ತಿ ಬಳಿಕ ತನಿಶಾ ಜತೆಗೂಡಿ ಆಡುತ್ತಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!