ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರು ತಿಂಗಳಿಂದ ಬಂದ್ ಆಗಿದ್ದ ಉತ್ತರಾಖಂಡದ ಚಮೋಲಿ ಜಿಲ್ಲೆಯ ಬದರಿನಾಥ ದೇವಾಲಯದ ಬಾಗಿಲುಗಳನ್ನು ಭಾನುವಾರ ಭಕ್ತರ ದರುಶನಕ್ಕಾಗಿ ತೆರೆಯಲಾಗಿದೆ.
ವೇದ ಮಂತ್ರಗಳ ಮೂಲಕ ಬೆಳಿಗ್ಗೆ 6 ಗಂಟೆಗೆ ತೆರೆಯಲಾಯಿತು. ವಿವಿಧ ಬಗೆಯ 15 ಟೈನ್ ಹೂವುಗಳಿಂದ ದೇವಾಲಯವನ್ನು ಅಲಂಕರಿಸಲಾಗಿತ್ತು. ಭಾರತೀಯ ಸೇನೆ ದೇವಾಲಯದ ಮುಂದೆ ಭಕ್ತಿಗೀತೆ ನುಡಿಸಿತು.
ಮೊದಲಿಗೆ ಬದರಿನಾಥ ಧಾಮದ ಪ್ರಧಾನ ಅರ್ಚಕ ರಾವಲ್, ಧರ್ಮಾಧಿಕಾರಿ ಮತ್ತು ವೇದಪಾಠಿಗಳು ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಮಹೇಂದ್ರ ಭಟ್ ಮತ್ತು ತೆಹ್ರಿ ಶಾಸಕ ಕಿಶೋರ್ ಉಪಾಧ್ಯಾಯ ಉಪಸ್ಥಿತರಿದ್ದರು.
ಈ ವೇಳೆ ಹೆಲಿಕಾಪ್ಟರ್ನಿಂದ ಭಕ್ತರ ಮೇಲೆ ಪುಷ್ಪವೃಷ್ಟಿ ಮಾಡಲಾಯಿತು. ಮಾನಾ ಮತ್ತು ಬೆಮ್ನಿ ಗ್ರಾಮದ ಮಹಿಳೆಯರು ದೇವಾಲಯದ ಆವರಣದಲ್ಲಿ ಜುಮೈಲೋ ನೃತ್ಯವನ್ನು ಪ್ರದರ್ಶಿಸಿದರು ಮತ್ತು ಇತರ ರಾಜ್ಯಗಳ ಭಕ್ತರು ‘ಭಜನೆ’ ಹಾಡಿದರು.