ಹೊಸದಿಗಂತ ವರದಿ ಹುಬ್ಬಳ್ಳಿ:
ಇಲ್ಲಿಯ ಹಳೇ ಬಸ್ ನಿಲ್ದಾಣ ಬಾರ್ ವೊಂದರ ಮುಂದೆ ನಿಲ್ಲಿಸಿದ ಬೈಕ್ ನಲ್ಲಿದ್ದ ಹಣದ ಬ್ಯಾಗ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಉಪನಗರ ಠಾಣೆಯ ಪೊಲೀಸರು ಆರೋಪಿಯೊಬ್ಬರನ್ನು ಬಂಧಿಸಿ, 7.97 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಗುಡಗೇರಿ ಗ್ರಾಮದ ರಮೇಶ ಮುರಕ್ಕಿಬಾವಿ ಬಂಧಿತ ಆರೋಪಿ.
8 ಲಕ್ಷ ಹಣವಿದ್ದ ಬ್ಯಾಗ್ ಅನ್ನು ಬೈಕ್ ಮೇಲೆಯೇ ಇಟ್ಟು ಮರೆತು ಊಟಕ್ಕೆ ತೆರಳಿದಾಗ ಕಳವು ಆಗಿದೆ ಎಂದು ಸ್ಥಳೀಯ ನಿವಾಸಿ ಸುನೀಲ್ ಅವರು ಶನಿವಾರ ಪ್ರಕರಣ ದಾಖಲಿಸಿದ್ದರು.
ಸುನೀಲ್ ಅವರ ದೂರನ್ನು ಆಧರಿಸಿ ಇನ್‌ಸ್ಪೆಕ್ಟರ್ ಎಂ.ಎಸ್. ಹೂಗಾರ ನೇತೃತ್ವದಲ್ಲಿ ಪಿಎಸ್ಐ ಮಲ್ಲಿಕಾರ್ಜುನ ಹೊಸೂರು ಹಾಗೂ ಸಿಬ್ಬಂದಿ ಎಸ್.ವಿ. ಯರಗುಪ್ಪಿ, ಪ್ರಕಾಶ ಕಲಗುಡಿ, ಗುಳೇಶ, ಎಸ್.ಟಿ. ಯಳವತ್ತಿ, ಮಂಜುನಾಥ ಹಾಲವರ, ರೇಣಪ್ಪ ಸಿಕ್ಕಲಗಾರ, ತರುಣ ಗಡ್ಡದವರ, ಜ್ಞಾನೇಶ ಮಾಂಗ, ಆರೂಢ ಕರೆಣ್ಣವರ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದು, ಹಣ ವಶಕ್ಕೆ ಪಡೆದುಕೊಂಡಿದ್ದಾರೆ.