ಹೊಸದಿಗಂತ ಮಡಿಕೇರಿ:
ಕಳೆದ ಐದೂವರೆ ವರ್ಷಗಳ ಹಿಂದೆ ನಡೆದ, ಸಂಪಾಜೆ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಕೊಡಗು ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಬಾಳಚಂದ್ರ ಕಳಗಿ ಹತ್ಯೆ ಪ್ರಕರಣದ ಆರೋಪಿಗಳಿಗೆ ಇಲ್ಲಿನ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
2019ರ ಮಾರ್ಚ್ 19 ರಂದು ಬಾಲಚಂದ್ರ ಕಳಗಿ ಅವರನ್ನು ಕಾರಿನಲ್ಲಿ ಹಿಂಬಾಲಿಸಿ ಅವರ ಚಲನವಲದ ಮೇಲೆ ನಿಗಾ ಇರಿಸಿದ್ದ ಆರೋಪಿಗಳು ಸಿನಿಮೀಯ ರೀತಿಯಲ್ಲಿ ಅವರ ಕಾರಿಗೆ ಲಾರಿಯನ್ನು ಡಿಕ್ಕಿಪಡಿಸಿ ಹತ್ಯೆ ಮಾಡಿದ್ದರು. ಆರಂಭದಲ್ಲಿ ಇದೊಂದು ಅಪಘಾತ ಪ್ರಕರಣ ಎಂದು ಬಿಂಬಿತವಾಗಿತ್ತಾದರೂ, ತನಿಖೆ ಆರಂಭಿಸಿದ ಪೊಲೀಸರಿಗೆ, ಹತ್ಯೆಗೆ ಕಾರಣವಾಗುವ ಕೆಲವು ಅಂಶಗಳು ಕಂಡು ಬಂದ ಹಿನ್ನೆಲೆಯಲ್ಲಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸಂಪತ್, ಹರಿಪ್ರಸಾದ್ ಮತ್ತು ಜಯನ್ ಎಂಬವರು ಸೇರಿ ಬಾಲಚಂದ್ರ ಕಳಗಿ ಅವರನ್ನು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿತ್ತು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಜಾಮೀನಿನಲ್ಲಿ ಹೊರ ಬಂದಿದ್ದ ಆರೋಪಿಗಳಲ್ಲಿ ಸಂಪತ್ ಎಂಬಾತನನ್ನು ನಂತರದಲ್ಲಿ ಸುಳ್ಯದ ಶಾಂತಿನಗರದಲ್ಲಿ ಹತ್ಯೆ ಮಾಡಲಾಗಿತ್ತು. ಉಳಿದ ಇಬ್ಬರು ಆರೋಪಿಗಳಾದ ಹರಿಪ್ರಸಾದ್ ಮತ್ತು ಜಯನ್ ಮೇಲಿನ ಆರೋಪ ಸಾಕ್ಷ್ಯಾಧಾರಗಳಿಂದ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶೆ ಪ್ರಶಾಂತಿ ಜಿ.ಅವರು ಅಪರಾಧಿಗಳಾದ ಪಿ.ಕೆ. ಹರಿಪ್ರಸಾದ್ ಹಾಗೂ ಕೆ.ಜಯನ್ ಅವರುಗಳಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರಕಾರಿ ಅಭಿಯೋಜಕ ಎನ್. ಪಿ ದೇವೇಂದ್ರ ವಾದ ಮಂಡಿಸಿದರು.