Friday, September 29, 2023

Latest Posts

ಬಾಲಸೋರ್ ರೈಲು ದುರಂತ: ನ್ಯಾಯಾಂಗ ಬಂಧನದಲ್ಲಿ ಮೂವರು ರೈಲ್ವೆ ಅಧಿಕಾರಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಿಬಿಐ ಕಸ್ಟಡಿ ಅವಧಿ ಮುಗಿದ ಬಳಿಕ ಬಾಲಸೋರ್ ರೈಲು ಅಪಘಾತದ ಆರೋಪಿಗಳಾದ ಮೂವರು ರೈಲ್ವೆ ಅಧಿಕಾರಿಗಳನ್ನು ಭುವನೇಶ್ವರದ ವಿಶೇಷ ನ್ಯಾಯಾಲಯ ಶುಕ್ರವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ರೈಲ್ವೇ ಇಲಾಖೆಯಿಂದ ಅಮಾನತುಗೊಂಡಿದ್ದ ಹಿರಿಯ ಸೆಕ್ಷನ್ ಇಂಜಿನಿಯರ್ (ಸಿಗ್ನಲ್) ಅರುಣ್ ಕುಮಾರ್ ಮಹಂತ, ಸೆಕ್ಷನ್ ಇಂಜಿನಿಯರ್ ಮೊಹಮ್ಮದ್ ಅಮೀರ್ ಖಾನ್ ಮತ್ತು ತಂತ್ರಜ್ಞ ಪಪ್ಪುಕುಮಾರ್ ಅವರನ್ನು ರಿಮಾಂಡ್ ಅವಧಿ ಮುಗಿದ ಹಿನ್ನೆಲೆಯಲ್ಲಿ ಶುಕ್ರವಾರ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ ಜುಲೈ 7ರಂದು ಐದು ದಿನಗಳ ಕಾಲ ರಿಮಾಂಡ್ ನೀಡಿದೆ. ನಂತರ, ಜುಲೈ 11 ರಂದು, ತನಿಖಾ ಸಂಸ್ಥೆಯ ಕೋರಿಕೆಯ ಮೇರೆಗೆ ನ್ಯಾಯಾಲಯವು ಇನ್ನೂ ನಾಲ್ಕು ದಿನಗಳವರೆಗೆ ಬಂಧನ ಅವಧಿಯನ್ನು ವಿಸ್ತರಿಸಿತು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಮುಂದಿನ ವಿಚಾರಣೆಯನ್ನು ಜುಲೈ 27ಕ್ಕೆ ನ್ಯಾಯಾಲಯ ಮುಂದೂಡಿದೆ.

ಮೂವರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 304, 201 ಮತ್ತು ರೈಲ್ವೇ ಕಾಯ್ದೆಯ ಸೆಕ್ಷನ್ 153 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಕುರಿತು ಸಿಬಿಐ ತನ್ನ ವರದಿಯನ್ನು ಇನ್ನೂ ಸಲ್ಲಿಸದಿದ್ದರೂ, ಆಗ್ನೇಯ ವೃತ್ತದ ರೈಲ್ವೆ ಸುರಕ್ಷತಾ ಆಯುಕ್ತರ (ಸಿಆರ್‌ಎಸ್) ತನಿಖಾ ವರದಿಯು ಸಿಗ್ನಲಿಂಗ್ ಸರ್ಕ್ಯೂಟ್ ಬದಲಾವಣೆಯಲ್ಲಿನ ಲೋಪದಿಂದ ಅಪಘಾತ ಸಂಭವಿಸಿದೆ ಎಂದು ಹೇಳಿದೆ.

ಜೂನ್ 2 ರಂದು ಎರಡು ಪ್ಯಾಸೆಂಜರ್ ರೈಲುಗಳು ಮತ್ತು ಗೂಡ್ಸ್ ರೈಲು ಡಿಕ್ಕಿಯಾಗಿ 293 ಜನರು ಸಾವನ್ನಪ್ಪಿ, 1,200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!