ಹೊಸದಿಗಂತ ಡಿಜಿಟಲ್ ಡೆಸ್ಕ್:
ಸದಾ ಜನರಿಂದ ತುಂಬಿರುವ ಬೆಂಗಳೂರಿನ ಪ್ರಮುಖವಾದ ಚರ್ಚ್ ಸ್ಟ್ರೀಟ್ನಲ್ಲಿ ಇನ್ಮುಂದೆ ಚಲನಚಿತ್ರ ಚಿತ್ರೀಕರಣ ಮಾಡುವಂತಿಲ್ಲ.
ಹೌದು, ಸಂಚಾರ ದಟ್ಟಣೆ ಕಾರಣದಿಂದಾಗಿ ಬಿಬಿಎಂಪಿ ಚಿತ್ರೀಕರಣಕ್ಕೆ ನಿರ್ಬಂಧ ಹೇರಿದೆ. ಕಳೆದ ಭಾನುವಾರ ಚರ್ಚ್ ಸ್ಟ್ರೀಟ್ನಲ್ಲಿ ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ಇದರಿಂದಾಗಿ ಸಂಚಾರ ದಟ್ಟಣೆ ಉಂಟಾಗಿತ್ತು.
ಇದನ್ನು ಗಮನಿಸಿದ ನಂತರ ಚರ್ಚ್ ಸ್ಟ್ರೀಟ್ನಲ್ಲಿ ಶೂಟಿಂಗ್ಗೆ ನಿರ್ಬಂಧ ವಿಧಿಸಲಾಗಿದೆ. ಸೂಕ್ತ ಅನುಮತಿ ಪಡೆಯದೆ ಚಿತ್ರೀಕರಣ ಮಾಡಲಾಗಿದೆ ಎನ್ನುವ ಆರೋಪ ಬಂದಿದ್ದು, ಚಿತ್ರತಂಡ ಪೊಲೀಸರಿಂದ ಅನುಮತಿ ಪಡೆದಿದ್ದೇವೆ ಎಂದು ಹೇಳಿತ್ತು.
ಆದರೆ ಪೊಲೀಸರು ಶೂಟಿಂಗ್ಗೆ ಅನುಮತಿ ನೀಡಿಲ್ಲ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಅನುಮತಿ ಪಡೆದಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಕೆಎಫ್ಸಿಸಿ ಕೂಡ ಸ್ಪಷ್ಟನೆ ನೀಡಿದ್ದು, ಯಾವುದೇ ಅನುಮತಿ ಪಡೆದಿಲ್ಲ ಎಂದು ಹೇಳಲಾಗಿದೆ.
ಪಾದಚಾರಿ ಮಾರ್ಗದಲ್ಲಿ ಶೂಟಿಂಗ್ ನಡೆಯುತ್ತಿದ್ದು, ನೂರಾರು ಮಂದಿ ಶೂಟಿಂಗ್ ನೋಡಲು ನಿಂತಿದ್ದರು. ಇದರಿಂದಾಗಿ ಸಂಚಾರ ದಟ್ಟಣೆ ಉಂಟಾಗಿತ್ತು.