ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶ(ಎನ್‌ಸಿಆರ್)ನಲ್ಲಿ ಪಟಾಕಿಗಳ ತಯಾರಿಕೆ, ಸಂಗ್ರಹಣೆ ಮತ್ತು ಮಾರಾಟ ನಿಷೇಧವನ್ನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ಇಂದು ನಿರಾಕರಿಸಿದೆ.
ನ್ಯಾಯಮೂರ್ತಿ ಅಭಯ್ ಎಸ್ ಓಕಾ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ, ದೆಹಲಿಯಲ್ಲಿ ಬೀದಿಗಳಲ್ಲಿ ಕೆಲಸ ಮಾಡುವ ದೊಡ್ಡ ಜನಸಂಖ್ಯೆಯ ಜನ ವಾಯು ಮಾಲಿನ್ಯದಿಂದ ತೊಂದರೆ ಅನುಭವಿಸುತ್ತಿದ್ದಾರೆ. ಪಟಾಕಿಗಳಿಂದ ಅವರ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಹೇಳಿದೆ.
ದೆಹಲಿ-ಎನ್‌ಸಿಆರ್‌ನಲ್ಲಿ ಪಟಾಕಿಗಳ ನಿಷೇಧ ಆದೇಶ ಮಾರ್ಪಡಿಸುವಂತೆ ಕೋರಿ ಪಟಾಕಿ ಕಂಪನಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಹಲವು ತಿಂಗಳಿಂದ ಹದಗೆಟ್ಟ ಸ್ಥಿತಿಯಲ್ಲಿಯೇ ಇದೆ. ಹೀಗಿರುವಾಗ ಪಟಾಕಿ ನಿಷೇಧ ಸಾಧ್ಯವೇ ಇಲ್ಲ ಎಂದು ಹೇಳಿದೆ.