ಉತ್ತರ ಪ್ರದೇಶದಲ್ಲಿ ಹಲಾಲ್ ಪ್ರಮಾಣಿತ ಉತ್ಪನ್ನಗಳಿಗೆ ನಿಷೇಧ?

ಹೊಸದಿಗಂತ ಡಿಜಿಟಲ್ ಡೆಸ್ಕ್

ಹಲಾಲ್ ಪ್ರಮಾಣಪತ್ರಗಳೊಂದಿಗೆ ಮಾರಾಟವಾಗುವ ಉತ್ಪನ್ನಗಳ ಮೇಲೆ ರಾಜ್ಯವ್ಯಾಪಿ ನಿಷೇಧವನ್ನು ಹೇರಲು ಉತ್ತರ ಪ್ರದೇಶ ಸರ್ಕಾರವು ಚಿಂತಿಸುತ್ತಿದೆ.

ನಕಲಿ ದಾಖಲೆಗಳನ್ನು ಬಳಸಿ ‘ಹಲಾಲ್ ಪ್ರಮಾಣಿತ’ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ವಿವಿಧ ಉದ್ದಿಮೆಗಳ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಲಖನೌದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದರ ಬೆನ್ನಲ್ಲೇ ಉತ್ತರ ಪ್ರದೇಶ ಸರ್ಕಾರ ಚಿಂತನೆ ನಡೆಸಿದೆ.

ಈ ಉದ್ಯಮಗಳು ನಕಲಿ ದಾಖಲೆಗಳ ಮೂಲಕ ತಮ್ಮ ಉತ್ಪನ್ನಗಳಿಗೆ ಹಲಾಲ್ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಇದರಲ್ಲಿ ಒಂದು ಉದ್ಯಮದ ಹೆಸರು ಚೆನ್ನೈ ಮೂಲದ ಹಲಾಲ್ ಇಂಡಿಯಾ ಪ್ರೈ ಲಿ. ಎನ್ನುವುದು ಎಫ್‌ಐಆರ್‌ನಿಂದ ತಿಳಿದುಬಂದಿದೆ.

ಸೌಂದರ್ಯವರ್ಧಕಗಳು, ಟೂತ್ ಪೇಸ್ಟ್‌ಗಳು, ಎಣ್ಣೆ ಮತ್ತು ಸೋಪ್ ಸೇರಿದಂತೆ ವಿವಿಧ ಬಗೆಯ ಉತ್ಪನ್ನಗಳ ಮಾರಾಟಕ್ಕಾಗಿ ನಕಲಿ ಹಲಾಲ್ ಪ್ರಮಾಣಪತ್ರವನ್ನು ಬಳಸಲಾಗುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ದಿಲ್ಲಿಯ ಜಮಿಯಾತ್ ಉಲೆಮಾ ಹಿಂದ್ ಹಲಾಲ್ ಟ್ರಸ್ಟ್, ಹಲಾಲ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಮುಂಬಯಿಯ ಜಮಿಯಾತ್ ಉಲೆಮಾದಂತಹ ಹಲವು ಸಂಸ್ಥೆಗಳನ್ನು ಕೂಡ ಉತ್ತರ ಪ್ರದೇಶ ಪೊಲೀಸರು ಎಫ್‌ಐಆರ್‌ನಲ್ಲಿ ಹೆಸರಿಸಿದ್ದಾರೆ.ಇದರ ಜತೆಗೆ ಅಪರಿಚಿತ ಉತ್ಪಾದನಾ ಕಂಪೆನಿಗಳು ಹಾಗೂ ಅವುಗಳ ಮಾಲೀಕರು, ಜನರು ದೇಶ ವಿರೋಧಿ ಸಂಚಿನ ಭಾಗವಾಗಿದ್ದು, ಭಯೋತ್ಪಾದನಾ ಸಂಘಟನೆಗಳಿಗೆ ಹಣಕಾಸಿನ ನೆರವು ಒದಗಿಸುತ್ತಿದ್ದಾರೆ ಎಂದು ಕೂಡ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕೆಲವು ಕಂಪೆನಿಗಳು ಮುಸ್ಲಿಂ ಸಮುದಾಯದ ನಡುವೆ ತಮ್ಮ ಮಾರಾಟವನ್ನು ಹೆಚ್ಚಿಸುವ ಉದ್ದೇಶದಿಂದ ತಮ್ಮ ಉತ್ಪನ್ನಗಳು ಹಲಾಲ್ ಪ್ರಮಾಣೀಕೃತ ಎಂದು ಮುದ್ರಿಸಲು ಆರಂಭಿಸಿವೆ. ಈ ಮೂಲಕ ಸಾರ್ವಜನಿಕರ ನಂಬಿಕೆ ಜತೆ ಆಟವಾಡುತ್ತಿವೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಲಖನೌದ ಹಜರತ್ ಗಂಜ್ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಿಸಿದ್ದರು.

ಇದರ ಬೆನ್ನಲ್ಲೇ ಹಲಾಲ್ ಪ್ರಮಾಣಪತ್ರದೊಂದಿಗೆ ಮಾರಾಟವಾಗುತ್ತಿರುವ ಅಂತಹ ಉತ್ಪನ್ನಗಳನ್ನು ನಿಷೇಧಿಸುವ ನಿಯಮ ಜಾರಿಗೆ ತರುವ ಸಾಧ್ಯತೆ ಇದೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ.

ಹಲಾಲ್ ಪ್ರಮಾಣ ಪತ್ರ ಎನ್ನುವುದು ಇಸ್ಲಾಮಿಕ್ ಕಾನೂನಿಗೆ ಅನುಗುಣವಾಗಿ ಸಿದ್ಧಪಡಿಸಿದ ಹಾಗೂ ಕಲಬೆರಕೆ ಇಲ್ಲದ ಉತ್ಪನ್ನ ಎಂಬುದನ್ನು ಸೂಚಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!