ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಮತ್ತು ಎನ್‌ಸಿಆರ್ ಮಾತ್ರವಲ್ಲದೇ ದೇಶಾದ್ಯಂತ ರಾಸಾಯನಿಕ ಪಟಾಕಿಗಳ ಬಳಕೆ ನಿಷೇಧಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಹಸಿರು ಪಟಾಕಿಗಳ ಬಳಕೆಯನ್ನು ಮಾತ್ರ ಅನುಮತಿಸುವ 2021ರ ಆದೇಶವು ದೆಹಲಿ-ಎನ್‌ಸಿಆರ್‌ಗೆ ಮಾತ್ರವಲ್ಲದೆ ದೇಶಾದ್ಯಂತ ಪಾಲನೆಯಾಗಬೇಕು ಎಂದು ಸುಪ್ರೀಂ ತಿಳಿಸಿದೆ.
ವಿಚಾರಣೆ ವೇಳೆ ಪೀಠವು “ಇಂದಿನ ದಿನಗಳಲ್ಲಿ” ಮಕ್ಕಳು ಪಟಾಕಿ ಸಿಡಿಸುವುದಿಲ್ಲ. ಬದಲಿಗೆ ಆ ಕೆಲಸವನ್ನು ಹಿರಿಯರೇ ಮಾಡುತ್ತಾರೆ. ಅಲ್ಲದೇ, ಪರಿಸರವನ್ನು ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿತು.
ಬೇರಿಯಂ ಮತ್ತು ಇತರ ಮಾಲಿನ್ಯಕಾರಕ ರಾಸಾಯನಿಕಗಳನ್ನು ಬಳಸುವ ಪಟಾಕಿಗಳ ಬಳಕೆಯನ್ನು ನಿಷೇಧಿಸುವ ಮತ್ತು ಹಬ್ಬದ ಅವಧಿಯಲ್ಲಿ ವಾಯು ಮತ್ತು ಶಬ್ದ ಮಾಲಿನ್ಯವನ್ನು ತಡೆಗಟ್ಟುವ ನ್ಯಾಯಾಲಯದ ಆದೇಶಗಳನ್ನು ಅನುಸರಿಸಲು ರಾಜಸ್ಥಾನ ಸರ್ಕಾರಕ್ಕೆ ನಿರ್ದೇಶನಗಳನ್ನು ಕೋರಿ ಸಲ್ಲಿಸಲಾದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ಎಂ ಎಂ ಸುಂದ್ರೇಶ್ ಅವರನ್ನೊಳಗೊಂಡ ಪೀಠವು ಆಲಿಸಿತು. ಈ ಹಿಂದೆ ನೀಡಲಾದ ಆದೇಶವು ದೇಶಾದ್ಯಂತ ಅನ್ವಯವಾಗುತ್ತದೆ. ರಾಜಸ್ಥಾನ ನ್ಯಾಯಾಯಲವು ಈ ಹಿಂದೆ ನೀಡಿದ ತೀರ್ಪುಗಳನ್ನು ಗಮನಿಸಬೇಕು ಎಂದು ಹೇಳಿತು.
ದೀಪಾವಳಿಗೂ ಮುನ್ನ ನಿಷೇಧಿತ ರಾಸಾಯನಿಕಗಳನ್ನು ಒಳಗೊಂಡಿರುವ ಪಟಾಕಿ ಸಿಡಿಸದಂತೆ 2021ರಲ್ಲಿ ಸುಪ್ರೀಂ ಕೋರ್ಟ್ ಹಲವು ನಿರ್ದೇಶನಗಳನ್ನು ನೀಡಿತ್ತು. ಪಟಾಕಿಗಳ ಮೇಲೆ ಸಂಪೂರ್ಣ ನಿಷೇಧವಿಲ್ಲ ಮತ್ತು ಬೇರಿಯಂ ಲವಣಗಳನ್ನು ಹೊಂದಿರುವ ಪಟಾಕಿಗಳನ್ನು ಮಾತ್ರ ನಿಷೇಧಿಸಲಾಗಿದೆ ಎಂದು ಪೀಠ ಸ್ಪಷ್ಟಪಡಿಸಿದೆ.